ಯಾದಗಿರಿ: ಯಾದಗಿರಿ ಸೈಬರ್ ಕ್ರೈಂ ಠಾಣೆ ಪಿಎಸ್ಐ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಹಾಗೂ ಅವರ ಪುತ್ರ ಪಂಪನಗೌಡ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಯಾದಗಿರಿ ಸೈಬರ್ ಕ್ರೈಂ ಠಾಣೆ ಪಿಎಸ್ಐ ಪರಶುರಾಮ್ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಚೆನ್ನಾರೆಡ್ಡಿ ಹಾಗೂ ಪುತ್ರನ ವಿರುದ್ಧ ಪರಶುರಾಮ್ ಕುಟುಂಬ ಗಂಭೀರ ಆರೋಪ ಮಾಡಿತ್ತು.
ಪೋಸ್ಟಿಂಗ್ ಗಾಗಿ ಶಾಸಕ ಚೆನ್ನಾರೆಡ್ಡಿ ಹಾಗೂ ಪುತ್ರ ಪದೇ ಪದೇ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದರು. 30 ಲಕ್ಷ ಹಣ ನೀಡಿ ವರ್ಷದ ಹಿಂದೆ ಯಾದಗಿರಿ ನಗರಕ್ಕೆ ಪರಶುರಾಮ್ ಪೋಸ್ಟಿಂಗ್ ಮಾಡಿಸಿಕೊಂಡಿದ್ದರು. ಆದರೆ ಒಂದು ವರ್ಷ ಪೂರೈಸುವ ಮೊದಲೇ ಯಾದಗಿರಿ ಸೈಬರ್ ಕ್ರೈಂ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಪರಶುರಾಮ್ ಸಾಕಷ್ಟು ಸಾಲದ ಸುಳಿಗೆ ಸಿಲುಕಿದ್ದರು. ಶಾಸಕರ ಹಣದ ದಾಹ ಹಾಗೂ ಕಿರುಕುಳಕ್ಕೆ ಪರಶುರಾಮ್ ಸಾವನ್ನಪ್ಪಿದ್ದಾರೆ ಎಂದು ಪತ್ನಿ ಶ್ವೇತಾ ಯಾದಗಿರಿ ಎಸ್ ಪಿ ಸಂಗೀತಾ ಅವರಿಗೆ ದೂರು ನೀಡಿದ್ದರು. ಪತಿ ಸಾವಿನ ಬಗ್ಗೆ ತನಿಖೆ ನಡೆಸಿ ನ್ಯಾಯ ಕೊಡಿಸುವಂತೆ ಒತ್ತಾಯಿಸಿದ್ದರು.
ಈ ಹಿನ್ನೆಲೆಯಲ್ಲಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಹಾಗೂ ಪುತ್ರ ಪಂಪನಗೌಡ ವಿರುದ್ಧ ಯಾದಗಿರಿ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪಂಪನಗೌಡ ವಿರುದ್ಧ ಜಾತಿ ನಿಂದನೆ ಕೇಸ್ ಕೂಡ ದಾಖಲಿಸಲಾಗಿದೆ.