ಹುಬ್ಬಳ್ಳಿ: ಮಹಿಳಾ ಕಾನ್ ಸ್ಟೇಬಲ್ ಗಳಿಗೆ ಇನ್ ಸ್ಪೆಕ್ಟರ್ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಹಳೆಹುಬ್ಬಳ್ಳಿ ಠಾಣೆ ಇನ್ ಸ್ಪೆಕ್ಟರ್ ವಿರುದ್ಧ ಇಂತಹ ಆರೋಪ ಕೇಳಿ ಬಂದಿದೆ.
ಮಹಿಳಾ ಕಾನ್ ಸ್ಟೇಬಲ್ ಗಳು ಇನ್ ಸ್ಪೆಕ್ಟರ್ ವಿರುದ್ಧ ಆರೋಪ ಮಾಡಿದ್ದು, ರಾತ್ರಿಯಾದರೆ ಮಹಿಳಾ ಸಿಬ್ಬಂದಿಗೆ ವಿಡಿಯೋ ಕಾಲ್ ಮಾಡಿ ಕಿರುಕುಳ ನೀಡುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ. ಪರಮೇಶ್ವರ್. ಮಹಿಳಾ ಆಯೋಗ ಮತ್ತು ಮಾನವ ಹಕ್ಕುಗಳ ಆಯೋಗಕ್ಕೆ ಸಿಬ್ಬಂದಿ ಪತ್ರ ಬರೆದಿದ್ದಾರೆ.
ಇನ್ ಸ್ಪೆಕ್ಟರ್ ಕಿರುಕುಳದಿಂದ ಬೇಸತ್ತು ಮಹಿಳಾ ಸಿಬ್ಬಂದಿ ಪತ್ರ ಬರೆದಿದ್ದಾರೆ. ಇನ್ ಸ್ಪೆಕ್ಟರ್ ವಿರುದ್ಧ 3 ಪುಟಗಳ ದೂರು ನೀಡಿದ್ದು, ಕಿರುಕುಳದಿಂದ ಮುಕ್ತಿ ನೀಡಲು ಮಹಿಳಾ ಸಿಬ್ಬಂದಿ ಮನವಿ ಮಾಡಿದ್ದಾರೆ.
ಇನ್ ಸ್ಪೆಕ್ಟರ್ ವಿಡಿಯೋ ಕರೆ ಮಾಡಿ ನಮ್ಮ ಜೊತೆ ಕೆಟ್ಟದಾಗಿ ಮಾತನಾಡುತ್ತಾರೆ. ವಿಡಿಯೋ ಕಾಲ್ ನಲ್ಲಿ ಮಾತನಾಡದಿದ್ದರೆ ನಿರಂತರವಾಗಿ ಕಿರುಕುಳ ನೀಡುತ್ತಾರೆ. ವಿಡಿಯೋ ಕರೆ ಮಾಡಿ ಅಸಭ್ಯವಾಗಿ ಮಾತನಾಡುತ್ತಾರೆ. ಪ್ರಜೆ ಕೇಳಲು ಹೋದಾಗ ನಮ್ಮ ಸೌಂದರ್ಯದ ಬಗ್ಗೆ ಮಾತನಾಡುತ್ತಾರೆ. ಅವರಿಂದಾಗಿ ನಮ್ಮ ಕುಟುಂಬದಲ್ಲಿ ಬಿರುಕು ಮೂಡಿದೆ. ಅವರಿಂದ ಮುಕ್ತಿ ಕೊಡಿ ಎಂದು ಹಳೆಹುಬ್ಬಳ್ಳಿ ಮಹಿಳಾ ಠಾಣೆ ಸಿಬ್ಬಂದಿ ಅಳಲು ತೋಡಿಕೊಂಡು ಪತ್ರ ಬರೆದು ಮನವಿ ಮಾಡಿದ್ದಾರೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.