ಬೆಂಗಳೂರು: 402 ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಹುದ್ದೆಗಳಿಗೆ ಸೆಪ್ಟೆಂಬರ್ 22 ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಲಿಖಿತ ಪರೀಕ್ಷೆ ನಡೆಸಲು ಸಕಲ ಸಿದ್ಧತೆ ಕೈಗೊಂಡಿದೆ.
ಒಟ್ಟು 66,000 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಪರೀಕ್ಷೆಗೆ ಒಂದು ವಾರ ಮೊದಲು ಪ್ರವೇಶ ಪತ್ರಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.
ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಕನ್ನಡ ಕಡ್ಡಾಯ ಪರೀಕ್ಷೆ ಸೆಪ್ಟೆಂಬರ್ 29ರಂದು ನಡೆಯಲಿದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಮಾತ್ರ ಅಕ್ಟೋಬರ್ 27ರಂದು ನಡೆಯುವ ಪ್ರಮುಖ ಪರೀಕ್ಷೆಗೆ ಅರ್ಹತೆ ಪಡೆಯಲಿದ್ದಾರೆ. ಒಂದು ಸಾವಿರ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ 5.7 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದು, ಈ ಪರೀಕ್ಷೆಗೆ ಕೂಡ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಪಿಎಸ್ಐ ನೇಮಕಾತಿಗೆ ಸೆಪ್ಟೆಂಬರ್ 22ರಂದು, ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಸೆ.29, ಅ27ರಂದು ನಡೆಯುವ ಪರೀಕ್ಷೆಗೆ ಅಭ್ಯರ್ಥಿಗಳು ಪೂರ್ಣ ತೋಳಿನ ವಸ್ತ್ರಗಳು, ಶೂ ಧರಿಸುವುದನ್ನು ನಿಷೇಧಿಸಲಾಗಿದೆ. ಪುರುಷ ಅಭ್ಯರ್ಥಿಗಳು ಸಾಧ್ಯವಾದಷ್ಟು ಕಾಲರ್ ರಹಿತ ಅಂಗಿ ಧರಿಸಲು ಆದ್ಯತೆ ನೀಡಬೇಕು. ಜೇಬುಗಳಿಲ್ಲದಿರುವ ಅಥವಾ ಕಡಿಮೆ ಜೇಬುಗಳಿರುವ ಪ್ಯಾಂಟ್ ಗಳಿಗೆ ಆದ್ಯತೆ ನೀಡಬೇಕು. ಕುರ್ತಾ, ಪೈಜಾಮ, ಜೀನ್ಸ್ ಪ್ಯಾಂಟ್ ಧರಿಸಿ ಪರೀಕ್ಷಾ ಕೊಠಡಿ ಪ್ರವೇಶಿಸಲು ಅವಕಾಶ ಇರುವುದಿಲ್ಲ.
ಮಹಿಳೆಯರಿಗೆ ಕಾಲುಂಗುರ ಮತ್ತು ಮಂಗಳಸೂತ್ರ ಧರಿಸಲು ಅವಕಾಶವಿದ್ದು, ಉಳಿದಂತೆ ಯಾವುದೇ ರೀತಿಯ ಲೋಹದ ಆಭರಣವನ್ನು ಕುತ್ತಿಗೆಯ ಸುತ್ತ ಧರಿಸುವುದು, ಕಿವಿಯೋಲೆ, ಉಂಗುರ ಮತ್ತು ಕಡಗಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ. ವಿಸ್ತಾರವಾದ ಕಸೂತಿ, ಹೂಗಳು ಬಟನ್ ಗಳನ್ನು ಹೊಂದಿರುವ ಬಟ್ಟೆಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ. ಸಾಧಾರಣ ಚಪ್ಪಲಿಗಳನ್ನು ಧರಿಸಲು ಸೂಚಿಸಲಾಗಿದೆ.
ಟೋಪಿ, ಮಾಸ್ಕ್, ಪೆನ್ಸಿಲ್, ಪೇಪರ್, ಎರೇಸರ್, ತಿಂಡಿ, ನೀರು, ಎಲೆಕ್ಟ್ರಾನಿಕ್ ವಸ್ತುಗಳು, ಮೊಬೈಲ್ ಫೋನ್, ಮೈಕ್ರೋಫೋನ್, ಬ್ಲೂಟೂತ್ ಸಾಧನಗಳು ಮತ್ತು ವಾಚ್ ಗಳನ್ನು ಪರೀಕ್ಷಾ ಕೊಠಡಿಯೊಳಗೆ ತರುವಂತಿಲ್ಲ. ಅಭ್ಯರ್ಥಿಯ ಪ್ರವೇಶ ಪತ್ರ ಮತ್ತು ಸರ್ಕಾರದಿಂದ ಮಾನ್ಯವಾದ ಫೋಟೋ ಗುರುತಿನ ಚೀಟಿ ತರುವುದು ಕಡ್ಡಾಯವಾಗಿದೆ.