ತುಮಕೂರು: ಎಸಿಬಿ ದಾಳಿಯ ಸಂದರ್ಭದಲ್ಲಿ ತಪ್ಪಿಸಿಕೊಂಡಿದ್ದ ಪಿಎಸ್ಐನನ್ನು ಜನ್ನೇನಹಳ್ಳಿ ಅರಣ್ಯದ ಸಮೀಪ ಪೊಲೀಸರು ಹಿಡಿದಿದ್ದಾರೆ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಜನ್ನೆನಹಳ್ಳಿ ಅರಣ್ಯದ ಬಳಿ ಪಿಎಸ್ಐ ಸೋಮಶೇಖರ್ ಅವರನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಸಮವಸ್ತ್ರವನ್ನು ಕಿತ್ತೆಸೆದು ಸೋಮಶೇಖರ್ ಪರಾರಿಯಾಗುತ್ತಿದ್ದ ವೇಳೆಯಲ್ಲಿ ಅವರನ್ನು ಹಿಡಿಯಲಾಗಿದೆ. ಲಂಚ ಸ್ವೀಕರಿಸಿ ಎಸಿಬಿ ಬಲೆಗೆ ಅವರು ಸಿಕ್ಕಿಬಿದ್ದಿದ್ದರು. ಪಿಎಸ್ಐ ಸೋಮಶೇಖರ್ ಸಿಎಸ್ ಪುರ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅವರನ್ನು ಬೆನ್ನಟ್ಟುವಲ್ಲಿ ಸುಸ್ತಾಗಿದ್ದ ಎಸಿಬಿ ಕಾನ್ಸ್ ಟೇಬಲ್ ಮಹೇಶ್ ಅವರನ್ನು ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಪಿಎಸ್ಐ ಸೋಮಶೇಖರ್ ವಿಚಾರಣೆ ನಡೆಸಲಾಗಿದೆ.
ಕೌಟುಂಬಿಕ ಕಲಹದ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಸ್ ಪುರ ಠಾಣೆಯಲ್ಲಿ ಚಂದ್ರಣ್ಣ ಎಂಬುವವರ ವಿರುದ್ಧ ದೂರು ದಾಖಲಾಗಿತ್ತು. ಚಂದ್ರಣ್ಣ ಅವರ ಕಾರ್ ಅನ್ನು ಸಿಎಸ್ ಪುರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದರು. ಚಂದ್ರಣ್ಣ ಜಾಮೀನು ಪಡೆದುಕೊಂಡು ಕಾರ್ ಬಿಡಿಸಿಕೊಳ್ಳಲು ಬಂದಿದ್ದ ಸಂದರ್ಭದಲ್ಲಿ ಕಾರ್ ಬಿಡಲು ಪಿಎಸ್ಐ 28 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಹೆಡ್ ಕಾನ್ಸ್ ಟೇಬಲ್ ಮೂಲಕ ಲಂಚಕ್ಕೆ ಬೇಡಿಕೆ ಇಡಲಾಗಿದ್ದು, ಈಗಾಗಲೇ 12 ಸಾವಿರ ರೂಪಾಯಿ ಪಡೆದುಕೊಂಡಿದ್ದರು.
ಇಂದು ಬಾಕಿ 16 ಸಾವಿರ ರೂಪಾಯಿ ಪಡೆಯುವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಎಸಿಬಿ ವಶದಲ್ಲಿದ್ದ ಸೋಮಶೇಖರ್ ಪರಾರಿಯಾಗಿದ್ದರು. ಅವರನ್ನು ಬೆನ್ನಟ್ಟಿ ಹಿಡಿಯಲು ಎಸಿಬಿ ಅಧಿಕಾರಿಗಳು ಕೂಡ ಹಿಂಬಾಲಿಸಿದ್ದು, ಸಾರ್ವಜನಿಕರು ಕೂಡ ಅವರನ್ನು ಹಿಡಿಯಲು ಓಡಿದ್ದರು. ಈ ವೇಳೆ ಯೂನಿಫಾರ್ಮ್ ಕಿತ್ತೆಸೆದು ಪರಾರಿಯಾಗಿದ್ದ ಪಿಎಸ್ಐ ಕೊನೆಗೂ ಸಿಕ್ಕಿಬಿದ್ದಿದ್ದಾರೆ.