ಬೆಂಗಳೂರು: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣ ಸಂಬಂಧ ಸಿಐಡಿ ನಿಸ್ಪಕ್ಷಪಾತವಾಗಿ ತನಿಖೆ ನಡೆಸುತ್ತಿದೆ. ಆದರೆ ಕಾಂಗ್ರೆಸ್ ನಾಯಕರು ಅನಗತ್ಯವಾಗಿ ಆರೋಪ ಮಾಡುವುದರಲ್ಲಿ ತೊಡಗಿದ್ದಾರೆ. ಆರೋಪಿ ದಿವ್ಯಾ ಹಾಗರಗಿಗೆ ಆಶ್ರಯ ನೀಡಿದ್ದೇ ಕಾಂಗ್ರೆಸ್ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಆರೋಪಿಸಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಗೃಹ ಸಚಿವರು, ಪ್ರಕರಣದ ಪ್ರಮುಖ ಆರೋಪಿ ಎನ್ನಲಾಗುತ್ತಿರುವ ದಿವ್ಯಾ ಹಾಗರಗಿಗೆ ಪುಣೆಯಲ್ಲಿ ಆಶ್ರಯ ನೀಡಿದವರೇ ಕಾಂಗ್ರೆಸ್ ನವರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರೇ ಪಿಎಸ್ಐ ಹಗರಣದಲ್ಲಿ ಭಾಗಿಯಾಗಿದ್ದಾರೆ. ಸಿಐಡಿ ತನಿಖೆಯಲ್ಲಿ ನಮ್ಮ ಸರ್ಕಾರ ಯಾವ ಹಸ್ತಕ್ಷೇಪ ಮಾಡುತ್ತಿಲ್ಲ. ಸ್ವತಂತ್ರವಾಗಿ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.
ತಮ್ಮ ಬಳಿ ದಾಖಲೆಗಳಿವೆ ಎಂದು ಹೇಳುವ ಕಾಂಗ್ರೆಸ್ ನಾಯಕರು ಸಿಐಡಿಗೆ ದಾಖಲೆ ಒಪ್ಪಿಸಲಿ. ಪಿಎಸ್ಐ ಹಗರಣದಲ್ಲಿ ಎಲ್ಲರನ್ನು ಅರೆಸ್ಟ್ ಮಾಡಲು ಆಗಲ್ಲ. ಓಎಂಆರ್ ಶೀಟ್ ನಲ್ಲಿ ಅನುಮಾನ ಬಂದರೆ ಅವರನ್ನು ಕರೆದು ವಿಚಾರಿಸುತ್ತಾರೆ ಎಂದು ಹೇಳಿದರು.
ಅಕ್ರಮದ ಬಗ್ಗೆ ಗೊತ್ತಾದ 2 ಗಂಟೆಯಲ್ಲೇ ಸಿಐಡಿ ವಿಶೇಷ ತಂಡ ರಚಿಸಿ ತನಿಖೆಗೆ ಆದೇಶ ನೀಡಲಾಗಿದೆ. ಎಲ್ಲಾ ಕಾಲದಲ್ಲಿಯೂ ಪರೀಕ್ಷಾ ಅಕ್ರಮ ನಡೆದಿದೆ. ಇದು ಇಂದು ನಿನ್ನೆಯದಲ್ಲ, ಕಾಂಗ್ರೆಸ್ ಅವಧಿಯಲ್ಲಿ ನಾಲ್ಕು ಬಾರಿ ಪಿಯು ಪ್ರಶ್ನೆ ಪತ್ರಿಕೆ ಲೀಕ್ ಆಗಿತ್ತು. ಇದರಿಂದ ಅನೇಕ ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಆರೋಪ ಮಾಡುವ ಮೊದಲು ಕಾಂಗ್ರೆಸ್ ಯೋಚಿಸಬೇಕು ಎಂದು ಕಿಡಿಕಾರಿದರು.