ಬೆಂಗಳೂರು: ಪಿಎಂ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆಯಡಿ ಮನೆಯ ಛಾವಣಿಗಳ ಮೇಲೆ ಸೌರಫಲಕ ಅಳವಡಿಕೆ ಉತ್ತೇಜಿಸಲು ಕೇಂದ್ರ ಸರ್ಕಾರ ಮತ್ತೊಂದು ಕ್ರಮ ಕೈಗೊಂಡಿದೆ.
ಸೂರಿನ ಮೇಲೆ ಸೌರಶಕ್ತಿಯಿಂದ ಉತ್ಪಾದಿಸಿ ಮನೆಗೆ ಬಳಸಿಕೊಂಡ ನಂತರ ಹೆಚ್ಚುರಿಯಾಗಿ ಲಭ್ಯವಾಗುವ ವಿದ್ಯುತ್ ಅನ್ನು ಖರೀದಿಸುವುದನ್ನು ಎಸ್ಕಾಂಗಳಿಗೆ ಕಡ್ಡಾಯಗೊಳಿಸಲಾಗುವುದು. ಈ ಕುರಿತಾಗಿ ಸಂಬಂಧಿಸಿದ ಕಾಯಿದೆಗೆ ತಿದ್ದುಪಡಿ ಕರಡು ಸಿದ್ಧವಾಗುತ್ತಿದ್ದು, ಇಷ್ಟರಲ್ಲೇ ಅಂತಿಮಗೊಳ್ಳಲಿದೆ ಎಂದು ಕೇಂದ್ರ ಹೊಸ ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ರಾಜ್ಯದ ನವೀಕರಿಸಬಹುದಾದ ಇಂಧನ ಉತ್ಪಾದಕರ ಸಂಘ, ಬಿಜೆಪಿ ವಾಣಿಜ್ಯ ವ್ಯಾಪಾರ ಪ್ರಕೋಷ್ಠ ವತಿಯಿಂದ ಬೆಂಗಳೂರಿನಲ್ಲಿ ಶನಿವಾರ ಆಯೋಜಿಸಿದ್ದ ಪ್ರಧಾನ ಮಂತ್ರಿ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆಯ ಜಾಗೃತಿ ಮತ್ತು ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬಡವರು, ಕೆಳ ಮಧ್ಯಮ ವರ್ಗದವರು ಸೂರಿನ ಮೇಲೆ ಸೌರಫಲಕ ಅಳವಡಿಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಈ ಯೋಜನೆ ಅಡಿ ಸಾಧ್ಯವಿದೆ. ಫಲಾನುಭವಿಗಳು ತಮಗೆ ಬೇಕಾದಷ್ಟು ವಿದ್ಯುತ್ ಬಳಸಿಕೊಂಡು ಹೆಚ್ಚುವರಿ ವಿದ್ಯುತ್ ಅನ್ನು ಎಸ್ಕಾಂಗಳಿಗೆ ಮಾರಾಟ ಮಾಡಿ ಹಣ ಗಳಿಸಲು ಅವಕಾಶವಿದೆ ಎಂದು ತಿಳಿಸಿದ್ದಾರೆ.