ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪೊಲೀಸರ ವಿರುದ್ಧವೇ ನಿರಂತರವಾಗಿ ಪೋಸ್ಟ್ ಹಾಕಿದ್ದ ಆರೋಪಿಯನ್ನು ಮಂಗಳೂರಿನ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಪಾಲವ್ವನಹಳ್ಳಿ ಗ್ರಾಮದ ಯೋಗೇಶ್ ಬಂಧಿತ ಆರೋಪಿಯಾಗಿದ್ದು, ಈತ 2019ರಲ್ಲಿ ಸಿಎಎ, ಎನ್.ಆರ್.ಸಿ. ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದ ವೇಳೆ ಈ ಪೋಸ್ಟ್ ಗಳನ್ನು ಹಾಕಿದ್ದ ಎನ್ನಲಾಗಿದೆ.
ಪೊಲೀಸರ ನೈತಿಕ ಸ್ಥೈರ್ಯ ಕುಂದಿಸುವ ಹಾಗೂ ಪೊಲೀಸ್ ಕುಟುಂಬದ ಮಾನಹಾನಿ ಮಾಡುವಂತಹ ಪೋಸ್ಟ್ ಗಳನ್ನು ಯೋಗೇಶ್ ಫೇಸ್ಬುಕ್ನಲ್ಲಿ ಹಾಕಿದ್ದು, ಈ ಕುರಿತು ಮಂಗಳೂರಿನ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ನಡೆಸಿದ್ದ ಸೈಬರ್ ಕ್ರೈಂ ಪೊಲೀಸರು ಎರಡೂವರೆ ವರ್ಷಗಳ ಬಳಿಕ ಆರೋಪಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಆತನನ್ನು ಎರಡು ವಾರಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.