ಬೆಂಗಳೂರು: ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ(ಮಧ್ಯಾಹ್ನ ಉಪಹಾರ ಯೋಜನೆ) ಕಾರ್ಯಕ್ರಮದಡಿ ಆಯ್ಕೆಗೊಂಡು ಅಡುಗೆ ಸಿಬ್ಬಂದಿ ಅಡುಗೆ ಕೆಲಸ ನಿರ್ವಹಿಸುತ್ತಿದ್ದು, 60 ವರ್ಷಗಳ ವಯೋಮಿತಿಯನ್ನು ಪೂರೈಸಿ ದಿನಾಂಕ:31.03.2022 ರಂದು ಅಥವಾ ನಂತರ ಅಡುಗೆ ಕೆಲಸದಿಂದ ಬಿಡುಗಡೆ ಹೊಂದಿರುವ ಅಥವಾ ಕೆಲಸದಿಂದ ಬಿಡುಗಡೆ ಹೊಂದುವ ಅಡುಗೆ ಸಿಬ್ಬಂದಿಗಳಿಗೆ ಅಂತಿಮವಾಗಿ ಒಂದು ಬಾರಿಯ ಇಡಿಗಂಟು ಸೌಲಭ್ಯವನ್ನು ನೀಡಲಾಗುವುದು.
60 ವರ್ಷಗಳ ವಯೋಮಿತಿಯನ್ನು ಪೂರೈಸಿ ಕೆಲಸದಿಂದ ಬಿಡುಗಡೆ ಹೊಂದಿರುವ ಮತ್ತು 2022ರ ಮಾ. 31 ರ ನಂತರದ ಅವಧಿಯಲ್ಲಿ 60 ವರ್ಷ ವಯೋಮಾನ ಪೂರೈಸಿ ಕೆಲಸದಿಂದ ಬಿಡುಗಡೆ ಹೊಂದುವ ಅಡುಗೆ ಸಿಬ್ಬಂದಿಗೆ ಒಂದು ಬಾರಿಯ ಇಡಿಗಂಟು ಸೌಲಭ್ಯವನ್ನು ಸರ್ಕಾರವು ಮಂಜೂರು ಮಾಡಿ ಆದೇಶಿಸಿದೆ.
ಹಾಗೂ 15 ವರ್ಷಕ್ಕಿಂತರೂ ಕಡಿಮೆ ಸೇವೆ ಸಲ್ಲಿಸಿದ್ದಲ್ಲಿ 30,000 ರೂಪಾಯಿ, 15 ವರ್ಷ ಹಾಗೂ ಅದಕ್ಕೂ ಹೆಚ್ಚು ಸೇವೆ ಸಲ್ಲಿಸಿದ್ದಲ್ಲಿ 40,000 ರೂಪಾಯಿ ನೀಡಲಾಗುವುದು.
ಅರ್ಹ ಅಡುಗೆ ಸಿಬ್ಬಂದಿಗಳಿಗೆ ಇಡಿಗಂಟಿನ ಮೊತ್ತ ಮಂಜೂರು ಮಾಡಲು ಷರತ್ತುಗಳು
ಅರ್ಹ ಅಡುಗೆ ಸಿಬ್ಬಂದಿಗೆ ಇಡಿಗಂಟು ನೀಡುವ ಸಂದರ್ಭದಲ್ಲಿ ಉಲ್ಲೇಖದ ಸರ್ಕಾರಿ ಆದೇಶದಲ್ಲಿನ ಹಾಗೂ ಈ ಸುತ್ತೋಲೆಯಲ್ಲಿ ನಮೂದಿಸಿರುವ ಎಲ್ಲಾ ಷರತ್ತುಗಳನ್ನು ಜಿಲ್ಲಾ ಮತ್ತು ತಾಲ್ಲೂಕು ಹಂತಗಳಲ್ಲಿನ ಅನುಷ್ಠಾನಾಧಿಕಾರಿಗಳು ಕಡ್ಡಾಯವಾಗಿ ಪಾಲಿಸತಕ್ಕದ್ದು.
ಇಡಿಗಂಟು ನೀಡಬೇಕಾಗಿರುವ ಅರ್ಹ ಪ್ರಕರಣಗಳಲ್ಲಿ ಅಡುಗೆ ಸಿಬ್ಬಂದಿ ಅಥವಾ ಅರ್ಹ ಕಾನೂನುಬದ್ಧ ಅವಲಂಬಿತರು ಇಡಿಗಂಟಿಗೆ ಬೇಡಿಕೆ ಪ್ರಸ್ತಾವನೆಯನ್ನು ಸೇವೆ ಸಲ್ಲಿಸಿರುವ ಶಾಲೆಯ ಮುಖ್ಯ ಶಿಕ್ಷಕರಿಗೆ ಸಲ್ಲಿಸುವುದು.
ಸಂಬಂಧಿಸಿದ ಶಾಲೆಗಳ ಮುಖ್ಯ ಶಿಕ್ಷಕರು ಶಾಲೆಯಲ್ಲಿರುವ ಅಡುಗೆ ಸಿಬ್ಬಂದಿಯ ಸೇವಾವಧಿಯ ಹಾಜರಾತಿ ದಾಖಲೆಗಳನ್ನು ಆಧರಿಸಿ, ಪರಿಶೀಲಿಸಿ, ಪ್ರಸ್ತಾವನೆ ಕ್ರಮಬದ್ಧವಾಗಿದ್ದಲ್ಲಿ, ಮಾಹಿತಿಗಳನ್ನು ದೃಢೀಕರಿಸಿ ಸೂಕ್ತ ಶಿಫಾರಸ್ಸಿನೊಂದಿಗೆ ಪ್ರಸ್ತಾವನೆಯನ್ನು ಸಂಬಂಧಿಸಿದ ತಾಲ್ಲೂಕು ಪಂಚಾಯತ್‌ನ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪರಿಶೀಲನೆಗಾಗಿ ಹಾಗೂ ಇಡಿಗಂಟು ಮಂಜೂರಾತಿಯ ಮುಂದಿನ ಕ್ರಮಕ್ಕಾಗಿ ಸಲ್ಲಿಸುವುದು.