130 ಶತಕೋಟಿ ಭಾರತೀಯರು ಹೆಮ್ಮೆ ಪಡುವ ದಿನವಿದು. ಭಾರತದ ಷೇರು ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿದೆ. ಭಾರತದ ಷೇರು ಮಾರುಕಟ್ಟೆ, ವಿಶ್ವದ 6 ನೇ ಅತಿದೊಡ್ಡ ಷೇರು ಮಾರುಕಟ್ಟೆಯಾಗಿ ದಾಖಲೆ ಬರೆದಿದೆ.
ಬೆಂಚ್‌ಮಾರ್ಕ್ ಸೆನ್ಸೆಕ್ಸ್, ಪ್ರಸ್ತುತ ವರ್ಷದಲ್ಲಿ ಶೇಕಡಾ 23 ಕ್ಕಿಂತ ಹೆಚ್ಚಿನ ಜಿಗಿತ ಕಂಡಿದೆ. 2021 ರಲ್ಲಿ, ಭಾರತದ ಷೇರು ಮಾರುಕಟ್ಟೆಯು, ಮಾರುಕಟ್ಟೆ ಮೌಲ್ಯದ ದೃಷ್ಟಿಯಿಂದ ಅತಿದೊಡ್ಡ ಲಾಭವನ್ನು ದಾಖಲಿಸಿದೆ. ಡಿಸೆಂಬರ್ 31, 2020 ರಿಂದ, ಸ್ಟಾಕ್ ಮಾರುಕಟ್ಟೆ ಮೌಲ್ಯ 873.4 ಅರಬ್ ಡಾಲರ್ ಗಿಂತಲೂ ಹೆಚ್ಚಾಗಿದೆ.
ಭಾರತವು ಫ್ರೆಂಚ್ ಷೇರು ಮಾರುಕಟ್ಟೆಯನ್ನು ಹಿಂದಿಕ್ಕಿ, ವಿಶ್ವದ ಆರನೇ ಅತಿದೊಡ್ಡ ಷೇರು ಮಾರುಕಟ್ಟೆಯಾಗಿದೆ. ಭಾರತದ ಷೇರು ಮಾರುಕಟ್ಟೆ ಬಂಡವಾಳೀಕರಣವು ಮಂಗಳವಾರ 3.4055 ಟ್ರಿಲಿಯನ್ ಡಾಲರ್ ತಲುಪಿದೆ. ಫ್ರಾನ್ಸ್ ನ ಷೇರು ಮಾರುಕಟ್ಟೆ ಬಂಡವಾಳೀಕರಣವು 3.4023 ಟ್ರಿಲಿಯನ್ ಡಾಲರ್ ನಲ್ಲಿದೆ.
2020ರಲ್ಲಿ ಕೊರೊನಾ ಕಾರಣದಿಂದ ಕುಸಿತ ಕಂಡಿದ್ದ ಭಾರತದ ಷೇರು ಮಾರುಕಟ್ಟೆ ನಂತ್ರ ಪುಟಿದಿದೆ. ಪ್ರಸ್ತುತ, ಯುಎಸ್ ಸ್ಟಾಕ್ ಮಾರ್ಕೆಟ್ ವಿಶ್ವದ ಷೇರು ಮಾರುಕಟ್ಟೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ಯುಎಸ್ ಸ್ಟಾಕ್ ಎಕ್ಸ್ಚೇಂಜ್ ಮಾರುಕಟ್ಟೆ ಕ್ಯಾಪ್ ಪ್ರಸ್ತುತ ಸುಮಾರು 51.3 ಟ್ರಿಲಿಯನ್ ಡಾಲರ್ ಆಗಿದೆ. ಎರಡನೇ ಸ್ಥಾನದಲ್ಲಿ ಚೀನಾ ಸ್ಟಾಕ್ ಮಾರುಕಟ್ಟೆಯಿದ್ದು, ಚೀನಾ ಷೇರು ಮಾರುಕಟ್ಟೆ ಮೌಲ್ಯ 12.42 ಟ್ರಿಲಿಯನ್ ಡಾಲರ್.
ಜಪಾನ್, ಹಾಂಕಾಂಗ್ ಮತ್ತು ಯುಕೆಯ ಷೇರು ಮಾರುಕಟ್ಟೆಗಳು ಕ್ರಮವಾಗಿ 7.43 ಟ್ರಿಲಿಯನ್ ಡಾಲರ್, 6.52 ಟ್ರಿಲಿಯನ್ ಡಾಲರ್ ಮತ್ತು 3.68 ಟ್ರಿಲಿಯನ್ ಡಾಲರ್ ನೊಂದಿಗೆ ಮೂರು, ನಾಲ್ಕು ಮತ್ತು ಐದನೇ ಸ್ಥಾನದಲ್ಲಿದೆ.