ಅಮರಾವತಿ: ಆಂಧ್ರ ಪ್ರದೇಶದ ಹೊಸ ಜಿಲ್ಲೆ ಕೋನಸೀಮಾ ಹೆಸರು ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಹಿಂಸಾತ್ಮಕ ಪ್ರತಿಭಟನೆ ನಡೆದಿದ್ದು, ಆಂಧ್ರಪ್ರದೇಶದ ಸಾರಿಗೆ ಸಚಿವರ ಮನೆಗೆ ಬೆಂಕಿ ಹಚ್ಚಲಾಗಿದೆ.
ಹೊಸ ಜಿಲ್ಲೆಗೆ ಅಂಬೇಡ್ಕರ್ ಅವರ ಹೆಸರು ಸೇರಿಸಿದ್ದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಆಂಧ್ರಪ್ರದೇಶದ ಅಮಲಾಪುರಂನಲ್ಲಿ ಭಾರಿ ಪ್ರತಿಭಟನೆ ನಡೆಸಲಾಗಿದೆ. ಪ್ರತಿಭಟನೆ ಸಂದರ್ಭದಲ್ಲಿ ಉದ್ರಿಕ್ತ ಗುಂಪು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದು, ಪೊಲೀಸ್ ಅಧೀಕ್ಷಕ ಸುಬ್ಬಾರೆಡ್ಡಿ ಸೇರಿದಂತೆ 20 ಕ್ಕೂ ಅಧಿಕ ಪೊಲೀಸರು ಗಾಯಗೊಂಡಿದ್ದಾರೆ. ಪೊಲೀಸ್ ವಾಹನಗಳು ಮತ್ತು ಟೆಂಟ್ ಗಳಿಗೆ ಉದ್ರಿಕ್ತ ಗುಂಪು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದೆ.
ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲು ಧರಣಿನಿರತರು ಯತ್ನ ನಡೆಸಿದ್ದರು. ಈ ವೇಳೆ ಗಲಾಟೆ ನಡೆದು ಹಿಂಸಾಚಾರಕ್ಕೆ ತಿರುಗಿದೆ. ಕೋನಸೀಮಾ ಜಿಲ್ಲಾ ಹೆಸರು ಬದಲಾವಣೆ ಮಾಡಬೇಕೆಂದು ಉದ್ರಿಕ್ತ ಗುಂಪು ಗಲಾಟೆ ನಡೆಸಿದೆ.
ಕೋನಸೀಮಾ ಜಿಲ್ಲೆಯ ಹೆಸರು ಬದಲಾವಣೆಯ ಆತಂಕ ಹಿಂಸಾಚಾರಕ್ಕೆ ತಿರುಗಿದೆ. ಕೋನಸೀಮಾ ಜಿಲ್ಲೆಗೆ ಅಂಬೇಡ್ಕರ್ ಜಿಲ್ಲೆ ಎಂದು ಮರುನಾಮಕರಣ ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯನ್ನು ಏಕಾಏಕಿ ನಿಲ್ಲಿಸಲಾಗಿದೆ. ಅಮಲಾಪುರಂನಲ್ಲಿರುವ ಸಚಿವ ವಿಶ್ವರೂಪ್ ಮನೆಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ. ಅವರ ಮನೆಗೆ ಬೆಂಕಿ ಹೊತ್ತಿಕೊಂಡ ನಂತರ ಅವರ ಕುಟುಂಬ ಸದಸ್ಯರು ಮನೆ ತೊರೆದಿದ್ದಾರೆ.
ಕೋನಸೀಮಾ ಜಿಲ್ಲಾ ಸಾಧನಾ ಸಮಿತಿ ಆಶ್ರಯದಲ್ಲಿ ಅಮಲಾಪುರದ ಕ್ಲಾಕ್ ಟವರ್ ಸೆಂಟರ್, ಮುಮ್ಮಿಡಿವರಂ ಗೇಟ್ ಮತ್ತಿತರ ಕಡೆ ನೂರಾರು ಜನರು ಪ್ರತಿಭಟನೆ ನಡೆಸಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ನಡೆಸಿದ್ದಾರೆ.