ಶಿವಮೊಗ್ಗ: ದೋಷಪೂರಿತ ಟ್ರ್ಯಾಕ್ಟರ್ ನೀಡಿದ್ದರಿಂದ ಶೋರೂಂ ಬಳಿಯೇ ಟ್ರ್ಯಾಕ್ಟರ್ ಗೆ ಬೆಂಕಿ ಹಚ್ಚಿ ರೈತರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಿಪ್ಪನ್ ಪೇಟೆಯಲ್ಲಿ ನಡೆದಿದೆ.
ಜಾನ್ ಡೀರ್ ಟ್ರಾಕ್ಟರ್ ಶೋರೂಂಲ್ಲಿ ಕಾರಗಡಿ ಸಮೀಪದ ಮಂಡಳ್ಳಿಯ ಲಕ್ಷ್ಮೀ ನಾರಾಯಣ ಅವರು ಟ್ರ್ಯಾಕ್ಟರ್ ಖರೀದಿಸಿದ್ದು, ಐದು ವರ್ಷದ ಗ್ಯಾರಂಟಿ ಅವಧಿ ಇದ್ದರೂ ಸರ್ವಿಸ್, ಬಿಡಿ ಭಾಗಗಳಿಗೆ ಹಣ. ಕೇಳುತ್ತಿದ್ದಾರೆ ಎಂದು ಆರೋಪಿಸಿ ರೈತರು ಹಾಗೂ ಕರ್ನಾಟಕ ಕಾರ್ಮಿಕ ಪರಿಷತ್ ವತಿಯಿಂದ ಪ್ರತಿಭಟನೆ ನಡೆಸಲಾಗಿದೆ.
ಎರಡು ವರ್ಷಗಳ ಹಿಂದೆ ಕಾಳೆ ಅಗ್ರಿಟೆಕ್ ನಲ್ಲಿ ಜಾನ್ ಡೀರ್ ಟ್ರಾಕ್ಟರ್ ಖರೀದಿಸಿದ್ದು, ಮಾರನೇ ದಿನವೇ ಮುಂಭಾಗದ ವ್ಹೀಲ್ ನಲ್ಲಿ ಸಮಸ್ಯೆ ಉಂಟಾಗಿದೆ. ಮಾಲೀಕರಿಗೆ ತಿಳಿಸಿದಾಗ ಏನೂ ಸಮಸ್ಯೆಯಾಗುವುದಿಲ್ಲ. ಐದು ವರ್ಷ ವಾರಂಟಿ ಇದೆ. ಏನಾದರೂ ಆದರೆ ನಮ್ಮ ಜವಾಬ್ದಾರಿ ಎಂದು ಮಾಲೀಕರು ಹೇಳಿ ಕಳುಹಿಸಿದ್ದಾರೆ. ಪದೇಪದೇ ಟ್ರ್ಯಾಕ್ಟರ್ ಕೈಕೊಡುತ್ತಿದ್ದು, ಈಗ ಓಡಿಸಲು ಸಾಧ್ಯವಾಗದ ಸ್ಥಿತಿಗೆ ತಲುಪಿದೆ.
ಸರ್ವಿಸ್ ಗೆ ಟ್ರ್ಯಾಕ್ಟರ್ ಬಿಡಲಾಗಿದ್ದು, 70,000 ರೂ. ಕಟ್ಟಬೇಕು ಇಲ್ಲದಿದ್ದರೆ ವಾಹನ ದುರಸ್ತಿ ಮಾಡುವುದಿಲ್ಲ ಎಂದು ಶೋರೂಂನವರು ತಿಳಿಸಿದ್ದಾರೆ. ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಸ್ಪಂದಿಸಿಲ್ಲ. ಈ ಹಿನ್ನೆಲೆಯಲ್ಲಿ ಸಂಘಟನೆಯವರೊಂದಿಗೆ ಟ್ರಾಕ್ಟರ್ ಶೋರೂಂ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಆಗಲೂ ಸ್ಪಂದಿಸದಿದ್ದಾಗ ಟ್ರಾಕ್ಟರ್ ಹಾಗೂ ತಮ್ಮ ಮೇಲೆ ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಅವರನ್ನು ಅಲ್ಲಿದ್ದವರು ರಕ್ಷಣೆ ಮಾಡಿದ್ದಾರೆ. ಸ್ಥಳಕ್ಕೆ ಪಿಎಸ್ಐ ಪ್ರವೀಣ್ ಭೇಟಿ ನೀಡಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಸ್ಥಗಿತಗೊಳಿಸಲಾಗಿದೆ.