ಬೆಂಗಳೂರು: ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಸಚಿವ ಕೆ.ಎಸ್. ಈಶ್ವರಪ್ಪ ರಾಜೀನಾಮೆ ನೀಡಬೇಕು. ಸಂಪುಟದಿಂದ ಅವರನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಸದಸ್ಯರು ಸದನದಲ್ಲಿ ಅಹೋರಾತ್ರಿ ಹೋರಾಟ ನಡೆಸಿದ್ದಾರೆ.
ವಿಧಾನಸಭೆ ಮತ್ತು ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್ ಸದಸ್ಯರು ರಾತ್ರಿ ಧರಣಿ ನಡೆಸಿದ್ದಾರೆ. ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಗೃಹಸಚಿವ ಆರಗ ಜ್ಞಾನೇಂದ್ರ, ಹಿರಿಯ ನಾಯಕರು ಮನವೊಲಿಸಲು ಮುಂದಾದರೂ ಪಟ್ಟು ಸಡಿಲಿಸದ ಕಾಂಗ್ರೆಸ್ ಸದಸ್ಯರು ರಾತ್ರಿ ಧರಣಿ ನಡೆಸಿದ್ದಾರೆ.
ರಾಷ್ಟ್ರಧ್ವಜದ ಕುರಿತಾಗಿ ಸಚಿವ ಈಶ್ವರಪ್ಪ ನೀಡಿದ ಹೇಳಿಕೆ ಉಭಯ ಸದನಗಳಲ್ಲಿ ಪ್ರತಿಧ್ವನಿಸಿತು. ಈಶ್ವರಪ್ಪ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಸದಸ್ಯರು ಸದನದಲ್ಲಿ ಪ್ರತಿಭಟಿಸಿದ್ದು, ಸದನದಲ್ಲಿ ಗದ್ದಲ ತೀವ್ರಗೊಂಡ ಹಿನ್ನೆಲೆಯಲ್ಲಿ ಸ್ಪೀಕರ್ ಕಾಗೇರಿ ಶುಕ್ರವಾರಕ್ಕೆ ಮುಂದೂಡಿದ್ದಾರೆ. ಕಾಂಗ್ರೆಸ್ ಸದಸ್ಯರು ಪಟ್ಟುಬಿಡದೇ ಆಹೋರಾತ್ರಿ ಧರಣಿ ನಡೆಸಿದ್ದಾರೆ.