ಬೆಂಗಳೂರು: ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರನ್ನು ಸೇರ್ಪಡೆ ಮಾಡಿದ್ದು, ಇದನ್ನು ಕೂಡಲೇ ತೆಗೆಯಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡಳಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ ವಿವಾದ ಸೃಷ್ಟಿಸುತ್ತಿವೆ. ಪರಸ್ಪರ ಕೆಸರೆರಚಾಟ ಮಾಡುವುದನ್ನು ಬಿಟ್ಟು ರೈತರ ಹಿತರಕ್ಷಣೆಗೆ ಒತ್ತು ನೀಡಬೇಕು. ವಕ್ಫ್ ಗೆ ಸೇರಿದ ಭೂಮಿ ಎಂಬ ದಾಖಲೆಗಳಿದ್ದಲ್ಲಿ ಸರ್ಕಾರ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸಿಎಂ ಹಾಗೂ ಕಂದಾಯ ಸಚಿವರ ನಿರ್ದೇಶನದ ಮೇರೆಗೆ ಜಿಲ್ಲಾಧಿಕಾರಿಗಳು ರೈತರ ಜಮೀನುಗಳ ಪಹಣಿಯಲ್ಲಿ ವಕ್ಪ್ ಬೋರ್ಡ್ ಹೆಸರು ಸೇರ್ಪಡೆ ಮಾಡಿದ್ದಾರೆ. ರೈತರನ್ನು ಒಕ್ಕಲಿಬ್ಬಿಸುವ ವಕ್ಫ್ ವಿವಾದವನ್ನು ಕೂಡಲೇ ಬಗೆಹರಿಸಬೇಕು. ವಕ್ಫ್ ಮಂಡಳಿಗೆ ನೀಡಿದ ಅಧಿಕಾರ ಹಿಂಪಡೆಯಬೇಕು. ಸರ್ಕಾರಕ್ಕೆ ಧಮ್ ಇದ್ದಲ್ಲಿ ಮಂದಿರ, ಮಸೀದಿ, ಚರ್ಚ್ ಗಳಿಗೆ ಸೇರಿದ ಆಸ್ತಿಯನ್ನು ರಾಷ್ಟ್ರೀಕರಣ ಮಾಡಬೇಕು ಎಂದು ಸವಾಲು ಹಾಕಿದ್ದಾರೆ.