ನವದೆಹಲಿ : ಪ್ರತಿಭಟನೆ ನಿಲ್ಲಿಸಿದರೆ ನಮಗೆ ಮತ್ತಷ್ಟು ಸಮಸ್ಯೆಗಳು ಎದುರಾಗಬಹುದು. ಹೀಗಾಗಿ ಕೇಂದ್ರ ಸರ್ಕಾರವು ರೈತರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವವರೆಗೂ ಹೋರಾಟ ನಡೆಯಲಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ಗುರ್ನಾಮ್ ಛಾರುಣಿ ಹೇಳಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಹೋರಾಟ ಹಮ್ಮಿಕೊಂಡಿದ್ದರು. ಸದ್ಯ ಕೇಂದ್ರ ಸರ್ಕಾರ ಈ ಬಿಲ್ ಗಳನ್ನು ಹಿಂಪಡೆದಿದೆ. ಅಲ್ಲದೇ, ಪ್ರತಿಭಟನೆ ಸಂದರ್ಭದಲ್ಲಿ ರೈತರ ಮೇಲೆ ದಾಖಲಾಗಿದ್ದ ಅಪರಾಧ ಪ್ರಕರಣಗಳನ್ನು ಹಿಂಪಡೆಯಲಾಗುವುದು ಎಂದು ಲಿಖಿತ ಭರವಸೆ ನೀಡಿದೆ.
ಆದರೆ, ಈಗಲೇ ಹೋರಾಟ ಹಿಂಪಡೆದರೆ ಸರ್ಕಾರವು ನಮ್ಮ ಮೇಲಿನ ಪ್ರಕರಣಗಳನ್ನು ಹಿಂಪಡೆಯದೇ ಬಿಡಬಹುದು. ಹೀಗಾಗಿ ಲಿಖಿತ ಪತ್ರ ಬಂದ ನಂತರ ಮತ್ತೊಮ್ಮೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು. ಪ್ರಕರಣ ಹಿಂಪಡೆಯಲು ಕೇಂದ್ರ ಸರ್ಕಾರ ದಿನಾಂಕ ನಿಗದಿ ಮಾಡಬೇಕು. ಆ ನಂತರ ಅವುಗಳನ್ನು ಹಿಂಪಡೆದ ನಂತರವೇ ನಮ್ಮ ಹೋರಾಟ ಅಂತ್ಯವಾಗಲಿದೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ ನೀಡಿರುವ ಪರಿಷ್ಕೃತ ಪ್ರಸ್ತಾವನೆಗೆ ರೈತ ಸಂಘಟನೆ ಒಪ್ಪಿದೆ. ನಿನ್ನೆಯಷ್ಟೇ ಕೇಂದ್ರ ಸರ್ಕಾರವು ಪರಿಷ್ಕೃತ ಪ್ರಸ್ತಾವನೆ ಸಲ್ಲಿಸಿತ್ತು.