ಬೆಂಗಳೂರು: ಬಿಸಿಯೂಟ ಕಾರ್ಯಕರ್ತೆಯರ ಅಹೋರಾತ್ರಿ ಧರಣಿಯನ್ನು ಹಿಂಪಡೆದುಕೊಳ್ಳಲಾಗಿದೆ. ಕೆಲವು ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಅಹೋರಾತ್ರಿ ಧರಣಿ ಹಿಂಪಡೆಯಲಾಗಿದೆ.
ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಅವರು ಸಂಘಟನೆಯ ಪ್ರಮುಖರೊಂದಿಗೆ ಚರ್ಚೆ ನಡೆಸಿದ್ದು, ಬಿಸಿಯೂಟ ಕಾರ್ಯಕರ್ತೆಯರು ಧರಣಿಯನ್ನು ಹಿಂಪಡೆದುಕೊಂಡಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅಹೋ ರಾತ್ರಿ ಧರಣಿ ನಡೆಸಲಾಗಿತ್ತು. ಕೆಲಸದಿಂದ 6500 ಬಿಸಿಯೂಟ ಕಾರ್ಯಕರ್ತೆಯರನ್ನು ವಜಗೊಳಿಸಲಾಗಿದ್ದು, ಸರ್ಕಾರದ ಈ ಕ್ರಮ ಖಂಡಿಸಿ ಹೋರಾಟ ಕೈಗೊಳ್ಳಲಾಗಿತ್ತು. ನಿವೃತ್ತಿ ನಂತರ ಪಿಂಚಣಿ ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸಿ ಕೊಡಬೇಕೆಂದು ಪುಟ್ಟ ಮಕ್ಕಳ ಜೊತೆಗೆ ಸಾವಿರಾರು ಕಾರ್ಯಕರ್ತರು ಧರಣಿ ನಡೆಸಿದ್ದರು.