ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಉಡೇವಾ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಶವ ಇಟ್ಟು ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ಬುಧವಾರ ರಾತ್ರಿ ನಡೆದಿದೆ.
ಗ್ರಾಮದ ರಂಗನಾಥ್(75) ವಯೋಸಹಜ ಅಸ್ವಸ್ಥತೆಯಿಂದ ನಿಧನರಾಗಿದ್ದಾರೆ. ಗ್ರಾಮದಲ್ಲಿ ಸ್ಮಶಾನಕ್ಕೆ ಜಾಗವನ್ನು ಮೀಸಲಾಗಿ ಇಡಲಾಗಿದ್ದು, ಇದನ್ನು ಒತ್ತುವರಿ ಮಾಡಲಾಗಿದೆ. ಮೃತ ರಂಗನಾಥ್ ಅವರಿಗೆ ಸ್ವಂತ ಜಮೀನು ಇರಲಿಲ್ಲ. ಇದರಿಂದ ಶವ ಹೂಳಲು ಗ್ರಾಮಸ್ಥರು ಪರದಾಡುವ ಸ್ಥಿತಿ ಎದುರಾಗಿತ್ತು.
ಆಕ್ರೋಶಗೊಂಡ ಜನ ಗ್ರಾಮ ಪಂಚಾಯಿತಿ ಕಚೇರಿ ಎದುರು ಮೃತದೇಹ ಇಟ್ಟು ಪ್ರತಿಭಟನೆ ನಡೆಸಿದ್ದಾರೆ. ಗ್ರಾಮದಲ್ಲಿ 1,200 ಕುಟುಂಬಗಳಿವೆ. ಅನೇಕ ವರ್ಷಗಳಿಂದ ಸ್ಮಶಾನ ಒತ್ತುವರಿ ಮಾಡಿರುವ ಬಗ್ಗೆ ದೂರು ಸಲ್ಲಿಸಲಾಗಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.