ಬೆಂಗಳೂರು: ಕಾವೇರಿ ಹೋರಾಟ, ಮೇಕೆದಾಟು ಪಾದಯಾತ್ರೆ ಸೇರಿದಂತೆ ನಾಡಿನ ಹಿತರಕ್ಷಣೆ ಸಂಬಂಧಿತ ಹೋರಾಟಗಳಲ್ಲಿ ಭಾಗವಹಿಸಿದ ಹೋರಾಟಗಾರರ ವಿರುದ್ಧ ದಾಖಲಿಸಿದ ಪ್ರಕರಣಗಳನ್ನು ಹಿಂಪಡೆಯುವಂತೆ ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರಿಗೆ ಮನವಿ ಸಲ್ಲಿಸಲಾಗಿದೆ.
ರಾಜ್ಯದಲ್ಲಿ ನೆಲ ಜಲ ಮತ್ತು ಭಾಷೆಯ ಹಿತರಕ್ಷಣೆಗಾಗಿ ಅನೇಕ ಹೋರಾಟಗಳು ನಡೆದಿದ್ದು, ಕಾವೇರಿ ನೀರಿಗೆ ಸಂಬಂಧಿಸಿದಂತೆ ಮೇಕೆದಾಟು ಯೋಜನೆ ಅನುಷ್ಠಾನಕ್ಕಾಗಿ ಹೋರಾಟ, ಪ್ರತಿಭಟನೆ, ಪಾದಯಾತ್ರೆ ನಡೆಸಲಾಗಿದೆ.
ಇಂತಹ ಸಂದರ್ಭದಲ್ಲಿ ಅಂದಿನ ಬಿಜೆಪಿ ಸರ್ಕಾರ ಹೋರಾಟ ನಿಯಂತ್ರಿಸಲು ಶಾಸಕರು, ಮಾಜಿ ಶಾಸಕರು, ಹಿರಿಯ ರಾಜಕಾರಣಿಗಳು, ಕನ್ನಡ ಪರ ಸಂಘಟನೆಗಳು, ರೈತ ಹೋರಾಟಗಾರರು, ಸಾರ್ವಜನಿಕರ ಮೇಲೆ ಸುಳ್ಳು ಪ್ರಕರಣ ದಾಖಲು ಮಾಡಿದೆ. ಇದರಿಂದ ಹಲವರು ನ್ಯಾಯಾಲಯಕ್ಕೆ ಅಲದಾಡುವಂತಾಗಿದ್ದು, ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಪ್ರಕರಣಗಳನ್ನು ಹಿಂಪಡೆಯುವ ಬಗ್ಗೆ ನಿರ್ಣಯ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.