ಬೆಂಗಳೂರು: ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಹೋರಾಟಗಾರರ ವಿರುದ್ಧ ದಾಖಲಾದ 41 ಕ್ರಿಮಿನಲ್ ಪ್ರಕರಣ ಹಿಂಪಡೆಯಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನ ಕೈಗೊಂಡಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಟ್ಟು 41 ಕ್ರಿಮಿನಲ್ ಪ್ರಕರಣ ಪಡೆಯಲು ತೀರ್ಮಾನಿಸಲಾಗಿದೆ.
ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಅವರು, ಜನಪ್ರತಿನಿಧಿಗಳು ಭಾಗಿಯಾಗಿಲ್ಲದ ನಾನಾ ಹೋರಾಟಗಳಿಗೆ ಸಂಬಂಧಿಸಿದ 39 ಕ್ರಿಮಿ ಪ್ರಕರಣ ಹಿಂಪಡೆಯಲು ಮತ್ತು ಎರಡು ಪ್ರಕರಣಗಳಲ್ಲಿ ಹೈಕೋರ್ಟ್ ನಲ್ಲಿ ಹಿಂಪಡೆಯಲು ತೀರ್ಮಾನಿಸಲಾಗಿದೆ ಎಂದರು.
ಜನಪ್ರತಿನಿಧಿಗಳು ಭಾಗಿಯಾದ ಪ್ರಕರಣಗಳನ್ನು ನ್ಯಾಯಾಲಯದ ಅನುಮತಿ ಮೇರೆಗೆ ಹಿಂಪಡೆಯಬೇಕಿದ್ದು, ಸದ್ಯ ರೈತ ಹೋರಾಟ ಮತ್ತು ಜನಪರ ಹೋರಾಟಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಹಿಂಪಡೆಯಲಾಗುವುದು ಎಂದು ಹೇಳಿದ್ದಾರೆ.