ಶಿವಮೊಗ್ಗ: ಕಳೆದ 4 ದಿನಗಳಿಂದಲೂ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸುತ್ತಿದ್ದರೂ ತಿರುಗಿ ನೋಡದ ಸರ್ಕಾರದ ಮತ್ತು ಅಧಿಕಾರಿಗಳ ವಿರುದ್ಧ ಮಹಾನಗರ ಪಾಲಿಕೆ ನೇರ ಪಾವತಿ ಪೌರ ಕಾರ್ಮಿಕರು ಇಂದು ತೀವ್ರ ಆಕ್ರೋಶ ವ್ಯಕ್ತಪಡಿಸಿ ಸುರಿಯುವ ಮಳೆಯಲ್ಲಿಯೇ ಅರೆಬೆತ್ತಲೆ ಮೆರವಣಿಗೆ ನಡೆಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಕಾಯಂಮಾತಿ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಿವಿಧ ವಿಭಾಗಗಳ ಪೌರ ಕಾರ್ಮಿಕರು ಜುಲೈ 1 ರಿಂದಲೇ ಪ್ರತಿಭಟನೆ ಕೈಗೊಂಡಿದ್ದಾರೆ. ಅಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಜುಲೈ 2 ರಿಂದಲೇ ಹಳೆಜೈಲು ಆವರಣದ ಫ್ರೀಡಂ ಪಾರ್ಕ್ ನಲ್ಲಿ ಅನಿರ್ಧಿಷ್ಟ ಕಾಲ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು.
ಕಳೆದ 4 ದಿನಗಳಿಂದಲೂ ಸರ್ಕಾರ ಪೌರ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸದೇ ಇರುವುದರಿಂದ ಪೌರ ಕಾರ್ಮಿಕರು ಇಂದು ತಮ್ಮ ಆಕ್ರೋಶವನ್ನು ಪ್ರತಿಭಟನೆಯ ಮೂಲಕವೇ ವ್ಯಕ್ತಪಡಿಸಿದ್ದಾರೆ. ಅರೆಬೆತ್ತಲೆ ಮೆರವಣಿಗೆ ನಡೆಸಿದ ಪೌರ ಕಾರ್ಮಿಕರು ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ಬೇಡಿಕೆ ಈಡೇರಿಸದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದ್ದಾರೆ.
ತಮ್ಮನ್ನು ಕಾಯಂಗೊಳಿಸಬೇಕು. ಆರೋಗ್ಯ, ವಿಮೆ ಸೇರಿದಂತೆ ಸೌಲಭ್ಯಗಳನ್ನು ನೀಡಬೇಕು. 60 ವರ್ಷ ಪೂರ್ಣಗೊಳಿಸಿ ನಿವೃತ್ತರಾಗುವವರಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡಬೇಕು. ನಿವೃತ್ತಿ ನಂತರ ಮಾಸಿಕ 5 ಸಾವಿರ ರೂ. ಪಿಂಚಣಿ ನೀಡಬೇಕು.ಅವಲಂಬಿತರಿಗೆ ಉದ್ಯೋಗ ನೀಡಬೇಕು. ಕರ್ತವ್ಯದಲ್ಲಿ ಮರಣ ಹೊಂದಿದರೆ ಅವರ ಕುಟುಂಬದವರಿಗೆ ಕೆಲಸ ನೀಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದೆ ಪೌರ ಕಾರ್ಮಿಕರು ಇಟ್ಟಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಪೆಂಚಾಲಯ್ಯ, ಪದಾಧಿಕಾರಿಗಳಾದ ನಾಗರಾಜ್, ರವೀಶ್, ನರಸಿಂಹಮೂರ್ತಿ, ರವಿಕಿರಣ್, ಸುದೀಪ್, ಗಣೇಶ್, ಶಿವರಾಜ್, ಕಿರಣ್, ಸೇರಿದಂತೆ ನಗರದ ಪೌರ ಕಾರ್ಮಿಕರು ಅರೆಬೆತ್ತಲೆ ಮೆರವಣಿಗೆ ನಡೆಸಿ ಹಳೆ ಜೈಲ್ ಆವರಣದಲ್ಲಿ ಅನಿರ್ಧಿಷ್ಟ ಪ್ರತಿಭಟನೆ ಮುಂದುವರೆಸಿದರು.