ಲಂಡನ್: ಕೊರೋನಾ ಲಸಿಕೆ ಪಡೆದಿದ್ದರೂ ಆರು ತಿಂಗಳಲ್ಲೇ ರೋಗನಿರೋಧಕ ಶಕ್ತಿ ನಶಿಸಲು ಆರಂಭಿಸುತ್ತದೆ ಎಂಬುದು ಬ್ರಿಟನ್ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಗೊತ್ತಾಗಿದೆ.
ಆಸ್ಟ್ರಾಜೆನಿಕಾ ಮತ್ತು ಫೈಜರ್ ಲಸಿಕೆ 2 ಡೋಸ್ ಪಡೆದಿದ್ದರೂ ಕೂಡ ಸೋಂಕಿನ ವಿರುದ್ಧ ಹೋರಾಡುವ ಶಕ್ತಿ ಆರು ತಿಂಗಳ ಒಳಗೆ ಕುಂಠಿತವಾಗಲು ಆರಂಭಿಸಿದೆ ಎನ್ನುವುದು ಅಧ್ಯಯನದಲ್ಲಿ ಗೊತ್ತಾಗಿದೆ. ಕೊರೋನಾ ಸೋಂಕಿನಿಂದ ರಕ್ಷಣೆ ನೀಡಲು ಎರಡು ಡೋಸ್ ಲಸಿಕೆ ಪಡೆದವರಿಗೆ ಬೂಸ್ಟರ್ ಡೋಸ್ ಕೂಡ ನೀಡಬೇಕೆಂದು ಹೇಳಲಾಗಿದೆ. ಈ ಮೂಲಕ ಬೂಸ್ಟರ್ ಡೋಸ್ ನೀಡಲು ತಜ್ಞರು ಹೇಳಿದ್ದ ಅಭಿಪ್ರಾಯಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. ಆರು ತಿಂಗಳೊಳಗೆ ಎರಡು ಡೋಸ್ ಲಸಿಕೆ ಪಡೆದವರಿಗೆ ರೋಗನಿರೋಧಕ ಶಕ್ತಿ ಕುಂಠಿತವಾಗುವುದರಿಂದ 3ನೇ ಡೋಸ್ ನೀಡಬೇಕಿದೆ ಎಂದು ಹೇಳಲಾಗಿದೆ.
ಬ್ರಿಟನ್ ZOE ಅಧ್ಯಯನ ಕೇಂದ್ರದ ಸಂಶೋಧಕರು 2 ಡೋಸ್ ಫೈಜರ್ ಲಸಿಕೆ ಪಡೆದವರಲ್ಲಿ ರೋಗನಿರೋಧಕ ಶಕ್ತಿ 5 -6 ತಿಂಗಳ ಬಳಿಕ ಶೇಕಡ 88 ರಿಂದ ಶೇಕಡ 74ಕ್ಕೆ ಇಳಿದಿರುವುದನ್ನು ಕಂಡುಕೊಂಡಿದ್ದಾರೆ.
ಆಸ್ಟ್ರಾಜೆನಿಕಾ 2 ಡೋಸ್ ಲಸಿಕೆ ಪಡೆದವರಲ್ಲಿ ಶೇಕಡ 77 ರಿಂದ ಶೇಕಡ 67 ರಷ್ಟು ರೋಗನಿರೋಧಕ ಶಕ್ತಿ ಕಡಿಮೆಯಾಗಿದೆ ಎನ್ನುವುದು ಗೊತ್ತಾಗಿದೆ.
ಕೋವಿಶೀಲ್ಡ್ ಲಸಿಕೆ ಎರಡು ಡೋಸ್ ಪಡೆದವರಲ್ಲಿ 4 -5 ತಿಂಗಳಲ್ಲಿ ರೋಗನಿರೋಧಕ ಶಕ್ತಿ ಶೇಕಡ 77 – ರಿಂದ ಶೇಕಡ 67ಕ್ಕೆ ಇಳಿಕೆಯಾಗಿದೆ. ಹೀಗಿದ್ದರೂ ಕೂಡ ಕೊರೋನಾ ಸೋಂಕು ರೂಪಾಂತರಿಗಳಿಂದ ರಕ್ಷಣೆ ಪಡೆಯಲು ಲಸಿಕೆ ಪರಿಣಾಮಕಾರಿ ಎಂದು ಹೇಳಲಾಗಿದೆ.