ಬೆಂಗಳೂರು: ರಾಜ್ಯದಲ್ಲಿ ವಕೀಲರ ರಕ್ಷಣೆಗೆ ಸಂಬಂಧಿಸಿದಂತೆ ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ಅಧಿನಿಯಮ -2023 ಜಾರಿಗೊಳಿಸಲಾಗಿದೆ.
ರಾಜ್ಯ ಸರ್ಕಾರ ಜೂನ್ 10 ರಂದು ಗೆಜೆಟ್ ಅಧಿಸೂಚನೆ ಪ್ರಕಟಿಸಿದ್ದು, ಅಂದಿನಿಂದಲೇ ಕಾಯಿದೆ ಜಾರಿಗೆ ಬರಲಿದೆ ಎಂದು ತಿಳಿಸಲಾಗಿದೆ. ಇದರೊಂದಿಗೆ ವಕೀಲ ವೃಂದದ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ. ಇನ್ನು ಮುಂದೆ ವಕೀಲರು ತಮ್ಮ ವೃತ್ತಿಪರ ಕರ್ತವ್ಯ ನಿರ್ವಹಿಸುವಾಗ ಅವರ ಮೇಲೆ ಹಲ್ಲೆ ನಡೆಸುವುದು, ಕರ್ತವ್ಯಕ್ಕೆ ಅಡ್ಡಿ, ಬೆದರಿಕೆ ಅಥವಾ ಕಿರುಕುಳ ನೀಡುವುದನ್ನು ನಿಷೇಧಿಸಲಾಗಿದೆ.
ಒಂದು ವೇಳೆ ಅಂತಹ ಕೃತ್ಯ ನಡೆದಲ್ಲಿ ಅದು ಶಿಕ್ಷಾರ್ಹ ಅಪರಾಧವಾಗಲಿದೆ. ಯಾವುದೇ ವ್ಯಕ್ತಿ ನ್ಯಾಯವಾದಿಯ ಮೇಲೆ ಹಿಂಸಾಚಾರ ಕೃತ್ಯ ಎಸಗುವಂತಿಲ್ಲ. ಒಂದು ವೇಳೆ ಹಲ್ಲೆ ಹಿಂಸಾಚಾರ ನಡೆದರೆ ಅಂತಹ ವ್ಯಕ್ತಿಗೆ ಆರು ತಿಂಗಳಿಂದ ಮೂರು ವರ್ಷದವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಅಥವಾ ಒಂದು ಲಕ್ಷ ರೂಪಾಯಿವರೆಗೆ ವಿಸ್ತರಿಸಬಹುದಾದ ದಂಡ ಭರಿಸಬೇಕಾಗುತ್ತದೆ ಎಂದು ಹೇಳಲಾಗಿದೆ.
ನ್ಯಾಯವಾದಿಗಳು ಯಾವುದೇ ಬಾಹ್ಯ ಪ್ರಭಾವಕ್ಕೆ ಒಳಗಾಗದೆ, ಭಯವಿಲ್ಲದೆ ತಮ್ಮ ವೃತ್ತಿಪರ ಸೇವೆಗಳನ್ನು ಸಲ್ಲಿಸಲು ಹಾಗೂ ಅವರ ಮೇಲಿನ ಹಿಂಸೆ ನಿಷೇಧಿಸಿ ಅವರಿಗೆ ರಕ್ಷಣೆ ನೀಡುವುದು ಕಾಯ್ದೆಯ ಮೂಲ ಉದ್ದೇಶವಾಗಿದೆ.