ಬೆಂಗಳೂರು: ತನ್ನ ಪತಿ ಗಂಡು ವೇಶ್ಯೆಯಾಗಿರುವುದನ್ನು ತಿಳಿದ ಮಹಿಳೆ ವಿಚ್ಛೇದನಕ್ಕಾಗಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಉತ್ತರ ಭಾರತ ಮೂಲದ 24 ವರ್ಷದ ಮಹಿಳೆಯ ಕುಟುಂಬ ಅನೇಕ ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದು, ಪ್ರತಿಷ್ಟಿತ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿರುವ ಮಹಿಳೆ, ಎರಡು ವರ್ಷಗಳ ಹಿಂದೆ ಉತ್ತರ ಭಾರತ ಮೂಲದ ಕಾಲ್ ಸೆಂಟರ್ ಉದ್ಯೋಗಿಯನ್ನು ಪ್ರೀತಿಸಿದ್ದು, ಎರಡೂ ಕುಟುಂಬದವರು ಒಪ್ಪಿ 2018 ರಲ್ಲಿ ಮದುವೆಯಾಗಿದೆ.
ಆರಂಭದಲ್ಲಿ ಅನ್ಯೋನ್ಯವಾಗಿದ್ದ ದಂಪತಿ ನಡುವೆ ನಂತರದಲ್ಲಿ ಸಣ್ಣ ವಿಚಾರಕ್ಕೂ ಜಗಳವಾಗುತ್ತಿತ್ತು. ಗಂಡ ಯಾವಾಗಲೂ ಮೊಬೈಲ್ ಮತ್ತು ಲ್ಯಾಪ್ ಟಾಪ್ ನಲ್ಲಿ ಬ್ಯುಸಿಯಾಗಿರುವುದನ್ನು ಗಮನಿಸಿದ ಪತ್ನಿ ಆತನ ವರ್ತನೆ ಬಗ್ಗೆ ಅನುಮಾನಗೊಂಡಿದ್ದಾಳೆ.
ಮೊಬೈಲ್ ಗೆ ಪಾಸ್ವರ್ಡ್ ಹಾಕಿದ್ದ ಕಾರಣ ಅದನ್ನು ನೋಡಲು ಸಾಧ್ಯವಾಗಿರಲಿಲ್ಲ. ಲ್ಯಾಪ್ಟಾಪ್ ಗಮನಿಸಿದಾಗ ಗಂಡನ ವಿವಿಧ ಭಂಗಿಯ ಬೆತ್ತಲೆ ಬೆತ್ತಲೆ ಫೋಟೋಗಳನ್ನು 25ಕ್ಕೂ ಹೆಚ್ಚು ಮಹಿಳೆಯರಿಗೆ ಕಳುಹಿಸಿರುವುದು ಗೊತ್ತಾಗಿದೆ. ಈ ಬಗ್ಗೆ ಪ್ರಶ್ನಿಸಿದಾಗ ಹಲ್ಲೆ ನಡೆಸಿದ್ದಾನೆ.
ಪತಿ ಆರು ವರ್ಷಗಳಿಂದ ಗಂಡು ವೇಶ್ಯೆಯಾಗಿ ಕೆಲಸ ಮಾಡುತ್ತಿದ್ದ ಎನ್ನುವುದು ಗೊತ್ತಾಗಿದೆ. ವೆಬ್ ಸೈಟ್ ಒಂದರಲ್ಲಿ ತನ್ನ ಮೊಬೈಲ್ ನಂಬರ್ ಹಾಕಿ, ಅವಿವಾಹಿತ ಎಂದು ಹೇಳಿಕೊಂಡಿದ್ದ ಆತ ಆಸಕ್ತ ಮಹಿಳೆಯರು ಸಂಪರ್ಕಿಸಬಹುದು ಎಂದು ತಿಳಿಸಿದ್ದ.
ಸಂಪರ್ಕ ಮಾಡುತ್ತಿದ್ದ ಮಹಿಳೆಯರಿಗೆ ತನ್ನ ಬೆತ್ತಲೆ ಫೋಟೋ ಕಳುಹಿಸುತ್ತಿದ್ದ. ಅವರು ನೀಡಿದ ವಿಳಾಸಕ್ಕೆ ಹೋಗಿ ಕಾಮತೃಷೆ ತೀರಿಸಿ ಗಂಟೆಗೆ ಮೂರರಿಂದ ಐದು ಸಾವಿರ ಪಡೆಯುತ್ತಿದ್ದ. ಕಳೆದ ಆರು ವರ್ಷಗಳಲ್ಲಿ ಅನೇಕ ವಿವಾಹಿತ ಮಹಿಳೆಯರು, ಯುವತಿಯರು ಈತನನ್ನು ಕರೆಸಿಕೊಂಡಿರುವುದು ಗೊತ್ತಾಗಿದೆ. ಹಲವಾರು ಮಹಿಳೆಯರೊಂದಿಗೆ ಗಂಡ ಅನೈತಿಕ ಸಂಬಂಧ ಹೊಂದಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ನೊಂದ ಪತ್ನಿ ಪರಿಹಾರ್ ಮಹಿಳಾ ಕೌಟುಂಬಿಕ ಸಲಹಾ ಕೇಂದ್ರಕ್ಕೆ ಭೇಟಿ ನೀಡಿ ಆಪ್ತಸಮಾಲೋಚಕರ ಬಳಿ ಸಂಕಷ್ಟ ತಿಳಿಸಿದ್ದಾರೆ. ಗಂಡನನ್ನು ಕರೆಸಿ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ. ಪತ್ನಿಯೊಂದಿಗೆ ಸಂಸಾರ ಮುಂದುವರೆಸುವುದಾಗಿ ತಿಳಿಸಿದ್ದಾನೆ. ಆದರೆ, ಇದಕ್ಕೆ ಒಪ್ಪದ ಸಂತ್ರಸ್ತೆ ವಿಚ್ಛೇದನಕ್ಕಾಗಿ ಕೋರ್ಟ್ ಮೊರೆ ಹೋಗಿದ್ದಾರೆ ಎಂದು ಹೇಳಲಾಗಿದೆ.