ಬೆಂಗಳೂರು: ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ ಬಗ್ಗೆ ಮಾಲೀಕನಿಗೆ ಮಾಹಿತಿ ಇಲ್ಲದಿದ್ದರೆ ಆತನ ವಿರುದ್ಧ ಮಾನವ ಕಳ್ಳಸಾಗಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸುವಂತಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ಚಂದ್ರಲೇಔಟ್ ಠಾಣೆ ಪೊಲೀಸರು ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ತಮ್ಮ ವಿರುದ್ಧ ದಾಖಲಿಸಿದ್ದ ಪ್ರಕರಣ ರದ್ದು ಮಾಡುವಂತೆ ನಾಗರಬಾವಿಯ ಪ್ರಭುರಾಜ್ ಅರ್ಜಿ ಸಲ್ಲಿಸಿದ್ದರು. ಕ್ರಿಮಿನಲ್ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯಪೀಠ, ವೇಶ್ಯಾವಾಟಿಕೆ ಗೊತ್ತಿದ್ದರೂ ಸುಮ್ಮನಿದ್ದರೆ ಪ್ರಕರಣ ದಾಖಲಿಸಬಹುದು. ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ ಬಗ್ಗೆ ಅರಿವಿಲ್ಲದ ಮಾಲೀಕನ ಮೇಲೆ ಪ್ರಕರಣ ದಾಖಲಿಸುವಂತಿಲ್ಲ ಎಂದು ತಿಳಿಸಿದೆ.
ಅರ್ಜಿದಾರನ ಮಾಲೀಕತ್ವದ ಜಾಗದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಆತನಿಗೆ ಮಾಹಿತಿ ಇರಲಿಲ್ಲ. ಈ ಬಗ್ಗೆ ಪೊಲೀಸರು ದೋಷಾರೋಪ ಪಟ್ಟಿಯಲ್ಲಿ ದಾಖಲಿಸಿದ್ದಾರೆ. ಹೀಗಿರುವಾಗ ಮಾನವ ಕಳ್ಳಸಾಗಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲು ಬರುವುದಿಲ್ಲ.
ಮಾನವ ಕಳ್ಳಸಾಗಣೆ ತಡೆ ಕಾಯ್ದೆಯ ಪ್ರಕಾರ, ಯಾವುದೇ ಜಾಗದಲ್ಲಿ ಏನು ನಡೆಯುತ್ತಿದೆ ಎಂಬುದು ಮಾಲೀಕನ ಅರಿವಿಗೆ ಇದ್ದಾಗ ಮಾತ್ರ ಆತನ ವಿರುದ್ಧ ಪ್ರಕರಣ ದಾಖಲಿಸಬಹುದಾಗಿದೆ ಎಂದು ಹೇಳಿದ ಕೋರ್ಟ್ ಅರ್ಜಿದಾರನ ವಿರುದ್ಧದ ಪ್ರಕರಣ ರದ್ದುಪಡಿಸಿ ಆದೇಶಿಸಿದೆ.