ಬೆಂಗಳೂರು: ಸ್ಪಾ ಮತ್ತು ಸಲೂನ್ ಹೆಸರಿನಲ್ಲಿ ರಾಜ್ಯ, ಹೊರ ರಾಜ್ಯ, ವಿದೇಶಿ ಯುವತಿಯರನ್ನು ಕರೆತಂದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಎರಡು ಅಡ್ಡೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ದಾಳಿಯ ಸಂದರ್ಭದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ನಾಲ್ವರು ಹಾಗೂ ನಾಲ್ವರು ಗಿರಾಕಿಗಳನ್ನು ಬಂಧಿಸಲಾಗಿದೆ. ರಾಜ್ಯ, ಹೊರ ರಾಜ್ಯ ಮತ್ತು ವಿದೇಶದ ಎಂಟು ಮಂದಿ ಯುವತಿಯರನ್ನು ರಕ್ಷಿಸಲಾಗಿದೆ.
ಇಂದಿರಾ ನಗರದ 100 ಅಡಿ ರಸ್ತೆಯ ನಿರಂಜನ್, ರೂಬಿ ಬಂಧಿತ ಆರೋಪಿಗಳು. ಇವರು ಸಲೂನ್ ಸೆಂಟರ್ ತೆರೆದು ಯುವತಿಯರನ್ನು ಅಕ್ರಮವಾಗಿ ಇರಿಸಿಕೊಂಡು ಗಿರಾಕಿಗಳನ್ನು ಸೆಳೆದು ವೇಶ್ಯಾವಾಟಿಕೆ ನಡೆಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಇಂದಿರಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೆಪಿ ನಗರದ ಐದನೇ ಹಂತದಲ್ಲಿ ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪಿ ಶರೀಫ್ ಸಾಬ್ ಮತ್ತು ರಾಜಶೇಖರ್ ಅವರನ್ನು ಬಂಧಿಸಿದ್ದು, ನಾಲ್ವರು ಯುವತಿಯರನ್ನು ರಕ್ಷಿಸಲಾಗಿದೆ. ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.