ಬೆಂಗಳೂರು: ಕೆಲಸ ಕೊಡಿಸುವುದಾಗಿ ಅಪ್ರಾಪ್ತೆಯನ್ನು ಕರೆತಂದು ವೇಶ್ಯಾವಾಟಿಕೆ ದಂಧೆಗೆ ದೂಡಿದ್ದ ಮಹಿಳೆಗೆ 14 ವರ್ಷ ಜೈಲು ಶಿಕ್ಷೆ ಹಾಗೂ 16 ಸಾವಿರ ರೂಪಾಯಿ ದಂಡ ವಿಧಿಸಿ ಒಂದನೇ ಎಫ್.ಟಿ.ಎಸ್.ಸಿ. ನ್ಯಾಯಾಲಯ ತೀರ್ಪು ನೀಡಿದೆ.
ಬೆಂಗಳೂರಿನ ಟಿ. ದಾಸರಹಳ್ಳಿಯ ಮಹಿಳೆ ಶಿಕ್ಷೆಗೆ ಗುರಿಯಾದವರು. ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ಕೊಡಿಸುವುದಾಗಿ ಬಾಲಕಿಯನ್ನು ಕರೆದುಕೊಂಡು ಬಂದಿದ್ದ ಮಹಿಳೆ ಮನೆಯಲ್ಲಿಯೇ ಇರಿಸಿಕೊಂಡು ಬಾಲಕಿಯನ್ನು ಬೆದರಿಸಿ ವೇಶ್ಯಾವಾಟಿಕೆ ದಂಧೆಗೆ ದೂಡಿದ್ದಳು.
ಪೀಣ್ಯ ಠಾಣೆ ಪೊಲೀಸರು ಮಾಹಿತಿ ಆಧರಿಸಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಗಿತ್ತು. ವಿಚಾರಣೆ, ವಾದ ಪ್ರತಿವಾದ ಆಲಿಸಿದ ನ್ಯಾ. ಎನ್. ರೂಪಾ ಅವರು ಮಹಿಳೆಗೆ 14 ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ. ಸರ್ಕಾರಿ ಅಭಿಯೋಜಕರಾದ ಪಿ. ಕೃಷ್ಣವೇಣಿ ವಾದ ಮಂಡಿಸಿದ್ದರು.