
ಚಿಕ್ಕಮಗಳೂರು: ಚಿಕ್ಕಮಗಳೂರಿನ ವೀಕ್ಷಣಾಲಯದಿಂದ ತಪ್ಪಿಸಿಕೊಂಡಿದ್ದ ಇಬ್ಬರು ಬಾಲಕಿಯರನ್ನು ವೇಶ್ಯಾವಾಟಿಕೆ ಜಾಲಕ್ಕೆ ತಳ್ಳಿದ್ದ ನಾಲ್ವರು ಸೇರಿ 10 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗದಲ್ಲಿ ಇತ್ತೀಚೆಗೆ 16 ವರ್ಷದ ಬಾಲಕಿಯೊಂದಿಗೆ ಯುವಕ ಸುತ್ತಾಡುವಾಗ ಆತನನ್ನು ಬಂಧಿಸಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಚಿಕ್ಕಮಗಳೂರು ಪೊಲೀಸರಿಗೆ ಪ್ರಕರಣ ವರ್ಗಾಯಿಸಿದ್ದಾರೆ. ಬಾಲಕಿಯನ್ನು ಚಿಕ್ಕಮಗಳೂರಿನ ವೀಕ್ಷಣಾಲಯಕ್ಕೆ ಒಪ್ಪಿಸಲಾಗಿತ್ತು.
ಅಲ್ಲಿಂದ ಮತ್ತೊಬ್ಬ ಬಾಲಕಿ ಜೊತೆ ಸೇರಿ ಹೊರಹೋಗಿದ್ದ ಬಾಲಕಿಯರು ವೇಶ್ಯಾವಾಟಿಕೆ ನಡೆಸುವವರ ಸಂಪರ್ಕಕ್ಕೆ ಸಿಲುಕಿದ್ದಾರೆ. ಹಾಸನದ ಮತ್ತೊಬ್ಬ ಮಧ್ಯವರ್ತಿಯ ಬಳಿ ಇಬ್ಬರು ಬಾಲಕಿಯರನ್ನು ಕಳುಹಿಸಿದ್ದು, ಅಲ್ಲಿ ಹಲವರು ಇಬ್ಬರ ಮೇಲೆ ದೌರ್ಜನ್ಯ ನಡೆಸಿದ್ದಾರೆ.
ಬಾಲಕಿಯರು ಹಾಸನದಿಂದ ಬಸ್ ಮೂಲಕ ಬೆಂಗಳೂರಿಗೆ ತೆರಳಿ ಅಲ್ಲಿಂದ ಧರ್ಮಸ್ಥಳಕ್ಕೆ ಪ್ರಯಾಣ ಬೆಳೆಸಿದ್ದರು. ಈ ನಡುವೆ ವೀಕ್ಷಣಾಲಯದ ಅಧಿಕಾರಿಗಳು ಮಹಿಳಾ ಪೊಲೀಸ್ ಠಾಣೆಗೆ ಬಾಲಕಿಯರು ಕಾಣೆಯಾದ ಬಗ್ಗೆ ದೂರು ನೀಡಿದ್ದರು. ಧರ್ಮಸ್ಥಳದಿಂದ ಬಾಲಕಿಯರನ್ನು ಕರೆತಂದು ವಿಚಾರಣೆ ನಡೆಸಿದಾಗ ವೇಶ್ಯಾವಾಟಿಕೆಗೆ ತಳ್ಳಿದ್ದು, ಹಲವರಿಂದ ದೌರ್ಜನ್ಯ ನಡೆದ ಬಗ್ಗೆ ಮಾಹಿತಿ ನೀಡಿದ್ದಾರೆ.
ಬಾಲಕಿಯರನ್ನು ವೀಕ್ಷಣಾಲಯಕ್ಕೆ ಒಪ್ಪಿಸಲಾಗಿದೆ. ಮಧ್ಯವರ್ತಿ ದಂಪತಿ, ಹಾಸನದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ದಂಪತಿ, ಬಾಲಕಿಯರ ಮೇಲೆ ದೌರ್ಜನ್ಯ ನಡೆಸಿದ ಆರು ಜನ ಸೇರಿ 10 ಮಂದಿಯನ್ನು ಬಂಧಿಸಲಾಗಿದ್ದು, ಇನ್ನೂ ಇಬ್ಬರ ಬಂಧನಕ್ಕೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಬಾಲಕಿಯರು ತಪ್ಪಿಸಿಕೊಂಡ ಹಿನ್ನೆಲೆಯಲ್ಲಿ ವೀಕ್ಷಣಾಲಯದ ಲೋಪದ ಬಗ್ಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.