ಬೆಂಗಳೂರು: ಬೆಂಗಳೂರು ನಗರದ ವಿವಿಧೆಡೆ ವೇಶ್ಯಾವಾಟಿಕೆ ಅಡ್ಡಗಳ ಮೇಲೆ ಸಿಸಿಬಿ ಪೊಲೀಸರು, ಸರ್ಕಾರೇತರ ಸಂಘ-ಸಂಸ್ಥೆಗಳು ಹಾಗೂ ಸ್ಥಳೀಯ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ದಾಳಿಯ ವೇಳೆ 12 ಮಂದಿ ಬಾಲಕಿಯರನ್ನು ರಕ್ಷಣೆ ಮಾಡಲಾಗಿದೆ.
5 ತಿಂಗಳ ಅವಧಿಯಲ್ಲಿ ನಗರ ವ್ಯಾಪ್ತಿಯಲ್ಲಿ 11 ಕಡೆಯಲ್ಲಿ ಜಂಟಿ ದಾಳಿ ನಡೆದಿದ್ದು, 14 ರಿಂದ 17 ವರ್ಷ ವಯಸ್ಸಿನ 12 ಅಪ್ರಾಪ್ತ ಬಾಲಕಿಯರ ರಕ್ಷಣೆ ಮಾಡಲಾಗಿದೆ. ಸಂತ್ರಸ್ತ ಬಾಲಕಿಯರಲ್ಲಿ ವಿದೇಶಿ ಮಕ್ಕಳು ಸೇರಿದ್ದಾರೆ. 26 ಮಂದಿ ಪಿಂಪ್ ಗಳು, ಐವರು ಗ್ರಾಹಕರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದ್ದು, ಬಾಲಕಿಯರನ್ನು ಸಮಾಜ ಕಲ್ಯಾಣ ಇಲಾಖೆಯ ಪುನರ್ವಸತಿ ಕೇಂದ್ರದ ಸುಪರ್ದಿಗೆ ನೀಡಲಾಗಿದೆ.
ಮಾನವ ಕಳ್ಳ ಸಾಗಣೆ ನಿಯಂತ್ರಣಕ್ಕೆ ನಿರಂತರ ಪ್ರಯತ್ನ ನಡೆಸಲಾಗಿದೆ. ವೇಶ್ಯಾವಾಟಿಕೆಗೆ ಬಾಲಕಿಯರ ಕಳ್ಳ ಸಾಗಣೆ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಆಧರಿಸಿ ಕೆಲವು ತಿಂಗಳಿಂದ ಕಾರ್ಯಾಚರಣೆ ನಡೆಸಲಾಗಿದೆ. ದಾಳಿಯ ವೇಳೆ ಪತ್ತೆಯಾದ ಮೂವರು ಬಾಂಗ್ಲಾದೇಶದ ಬಾಲಕಿಯರನ್ನು ವಾಪಸ್ ಕಳುಹಿಸಲು ಕ್ರಮ ವಹಿಸಲಾಗಿದೆ.
ನಗರದಲ್ಲಿ ವೇಶ್ಯಾವಾಟಿಕೆ ಬಗ್ಗೆ ಮಾಹಿತಿ ಇದ್ದಲ್ಲಿ ಪೊಲೀಸರಿಗೆ ತಿಳಿಸುವಂತೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಮನವಿ ಮಾಡಿದ್ದಾರೆ. ವೇಶ್ಯಾವಾಟಿಕೆ ನಡೆಯುತ್ತಿರುವುದು ಕಂಡುಬಂದಲ್ಲಿ ಪೊಲೀಸ್ ನಿಯಂತ್ರಣ ಕೊಠಡಿ 112 ಗೆ ಅಥವಾ ಸ್ಥಳೀಯ ಪೊಲೀಸರಿಗೆ ತಿಳಿಸುವಂತೆ ಹೇಳಿದ್ದಾರೆ.