ನವದೆಹಲಿ: ನವೆಂಬರ್ 30 ರ ನಂತರ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಉಚಿತ ಪಡಿತರ ವಿತರಿಸುವುದಿಲ್ಲ. ದೇಶದ ಆರ್ಥಿಕತೆ ಪುನರುಜ್ಜೀವನದ ಹಂತದಲ್ಲಿರುವ ಕಾರಣ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯನ್ನು ವಿಸ್ತರಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ಹೇಳಲಾಗಿದೆ.
ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣ ಇಲಾಖೆಯ ಕಾರ್ಯದರ್ಶಿ ಸುಧಾಂಶು ಪಾಂಡೆ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ವ್ಯಾಪ್ತಿಯಲ್ಲಿ ದೇಶದ 80 ಕೋಟಿ ಪಡಿತರ ಚೀಟಿದಾರರಿಗೆ ಸರ್ಕಾರದಿಂದ ಉಚಿತವಾಗಿ ಪಡಿತರ ವಿತರಿಸಲಾಗುತ್ತಿದೆ. ಆರ್ಥಿಕತೆಯಲ್ಲಿ ಚೇತರಿಕೆ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ನವೆಂಬರ್ 30ರ ನಂತರ ಉಚಿತ ಪಡಿತರವನ್ನು ವಿಸ್ತರಿಸುವ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಹೇಳಿದ್ದಾರೆ.
ಆರ್ಥಿಕತೆಯಲ್ಲಿ ಚೇತರಿಕೆ ಮತ್ತು ಒಎಂಎಸ್‌ಎಸ್ ನೀತಿಯಡಿಯಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಆಹಾರ ಧಾನ್ಯಗಳ ಉತ್ತಮ ವಿಲೇವಾರಿ ದೃಷ್ಟಿಯಿಂದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ(ಪಿಎಂಜಿಕೆಎವೈ) ಮೂಲಕ ಉಚಿತ ಪಡಿತರ ವಿತರಣೆಯನ್ನು ನವೆಂಬರ್ 30 ರ ನಂತರ ವಿಸ್ತರಿಸುವ ಯಾವುದೇ ಪ್ರಸ್ತಾವನೆಯನ್ನು ಕೇಂದ್ರ ಹೊಂದಿಲ್ಲ ಎಂದು ಹೇಳಲಾಗಿದೆ.
ಕೋವಿಡ್-19 ನಿಂದ ಉಂಟಾದ ತೊಂದರೆ ನಿವಾರಿಸಲು PMGKAY ಅನ್ನು ಮಾರ್ಚ್ 2020 ರಲ್ಲಿ ಘೋಷಿಸಲಾಯಿತು. ಆರಂಭದಲ್ಲಿ, ಈ ಯೋಜನೆಯನ್ನು ಏಪ್ರಿಲ್-ಜೂನ್ 2020 ಅವಧಿಗೆ ಪ್ರಾರಂಭಿಸಲಾಗಿತ್ತು. ಆದರೆ ನಂತರ ಅದನ್ನು ನವೆಂಬರ್ 30 ರವರೆಗೆ ವಿಸ್ತರಿಸಲಾಗಿದೆ.
PMGKAY ಅಡಿಯಲ್ಲಿ, ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ (NFSA) ಅಡಿಯಲ್ಲಿ ಗುರುತಿಸಲಾದ 80 ಕೋಟಿ ಪಡಿತರ ಚೀಟಿದಾರರಿಗೆ ಸರ್ಕಾರವು ಉಚಿತ ಪಡಿತರವನ್ನು ಪೂರೈಸುತ್ತದೆ. ಸಬ್ಸಿಡಿ ಆಧಾರದ ಮೇಲೆ ಪಡಿತರ ಅಂಗಡಿಗಳ ಮೂಲಕ ಉಚಿತ ಪಡಿತರವನ್ನು ನೀಡಲಾಗುತ್ತದೆ.