ಪ್ರವಾದಿ ಮಹಮ್ಮದ್ ವಿರುದ್ದ ಅವಹೇಳನಾಕಾರಿ ಹೇಳಿಕೆ ನೀಡಿರುವ ನೂಪುರ್ ಶರ್ಮಾ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿ ಭಾರತದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಬಿಹಾರ, ಜಾರ್ಕಂಡ್ ಹಾಗೂ ಪಶ್ಚಿಮ ಬಂಗಾಳ ಸೇರಿದಂತೆ ಕೆಲವೆಡೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು ಇಬ್ಬರು ಬಲಿಯಾಗಿದ್ದಾರೆ.
ಇದರ ಮಧ್ಯೆ ನೆರೆ ರಾಷ್ಟ್ರ ಪಾಕಿಸ್ತಾನ ತನ್ನ ಕುತಂತ್ರ ಬುದ್ದಿಯನ್ನು ತೋರಿಸುತ್ತಿರುವ ಸಂಗತಿ ಮತ್ತೊಮ್ಮೆ ಜಗತ್ತಿನ ಮುಂದೆ ಬಯಲಾಗಿದೆ. ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ವಿಶ್ವದಾದ್ಯಂತ ಭಾರತ ವಿರೋಧಿ ಭಾವನೆಗಳನ್ನು ಬಿತ್ತಲು ಪಾಕಿಸ್ತಾನ ಯತ್ನಿಸಿರುವ ಸಂಗತಿ Digital Forensics Research and analytics centre (DFRAC) ನಡೆಸಿದ ವಿಶ್ಲೇಷಣೆಯಲ್ಲಿ ಬಹಿರಂಗವಾಗಿದೆ.
ಟ್ವಿಟ್ಟರ್ ನಲ್ಲಿ ಬಂದ ಟ್ವೀಟ್ ಗಳನ್ನು ಕೂಲಂಕುಷವಾಗಿ ಪರಿಶೀಲಿಸಿದ ವೇಳೆ ಇವುಗಳಲ್ಲಿ ಬಹುತೇಕ ಅನಧಿಕೃತ ಖಾತೆಗಳ ಮೂಲಕ ಬಂದಿದ್ದವಾಗಿವೆ. ಸುಮಾರು 60,000 ಟ್ವೀಟ್ ಗಳನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದ ದೇಶಗಳಿಂದ ಟ್ವೀಟ್ ಮಾಡಲಾಗಿದ್ದು, ಆದರೆ ಇವುಗಳ ಮೂಲ ಪಾಕಿಸ್ತಾನ ಎಂಬುದು ಗೊತ್ತಾಗಿದೆ. ಈ ಟ್ವೀಟ್ ಗಳನ್ನು ಪಾಕಿಸ್ತಾನದ 7,100 ಟ್ವಿಟ್ಟರ್ ಖಾತೆಗಳಿಂದ ಮಾಡಲಾಗಿದೆ ಎಂಬುದು Digital Forensics Research and analytics centre (DFRAC) ವಿಶ್ಲೇಷಣೆಯಲ್ಲಿ ತಿಳಿದುಬಂದಿದೆ.
ಇಷ್ಟೇ ಅಲ್ಲ, ಪಾಕಿಸ್ತಾನದ ಮಾಜಿ ರಾಯಭಾರಿ ಅಬ್ದುಲ್, ಈಗ ಬಿಜೆಪಿಯಿಂದ ಉಚ್ಚಾಟಿತರಾಗಿರುವ ನವೀನ್ ಜಿಂದಾಲ್ ಅವರನ್ನು ಉದ್ಯಮಿ ಜಿಂದಾಲ್ ಅವರ ಸಹೋದರ ಎಂದು ತಪ್ಪಾಗಿ ಉಲ್ಲೇಖಿಸಿದ್ದ. ಅಲ್ಲದೇ ಇಂಗ್ಲೆಂಡ್ ಕ್ರಿಕೆಟಿಗ ಮೊಹಿನ್ ಆಲಿ, ನೂಪುರ್ ಶರ್ಮಾ ಪ್ರವಾದಿ ಮಹಮ್ಮದರಿಗೆ ಅವಹೇಳನ ಮಾಡಿರುವುದನ್ನು ಖಂಡಿಸಿ ಐಪಿಎಲ್ ಪಂದ್ಯ ತೊರೆದಿದ್ದಾರೆ ಎಂಬ ಸುಳ್ಳು ಸುದ್ದಿಯ ಸ್ಕ್ರೀನ್ ಶಾಟ್ ನ್ನು ಪಾಕಿಸ್ತಾನದ ಟ್ವಿಟ್ಟರ್ ಬಳಕೆದಾರರು ಶೇರ್ ಮಾಡಿಕೊಂಡಿದ್ದರು.
#Stopinsulting_ProphetMuhammad, #boycottindianproduct ಎಂಬ ಕಾಮನ್ ಹ್ಯಾಶ್ ಟ್ಯಾಗ್ ಅನ್ನು ಪಾಕಿಸ್ತಾನದ ಅನಧಿಕೃತ ಟ್ವಿಟ್ಟರ್ ಖಾತೆಗಳಲ್ಲಿ ಬಳಸಿಕೊಂಡಿದ್ದು, ಈ ಮೂಲಕ ಭಾರತ ವಿರೋಧಿ ಭಾವನೆ ಬಿತ್ತಲು ಯತ್ನಿಸಲಾಗಿತ್ತು.
ಟಿವಿ ಡಿಬೇಟ್ ಒಂದರಲ್ಲಿ ನೂಪುರ್ ಶರ್ಮಾ ಪ್ರವಾದಿ ಮಹಮ್ಮದ್ ವಿರುದ್ದ ಅವಹೇಳನಾಕಾರಿ ಹೇಳಿಕೆ ನೀಡಿದ್ದಾರೆಂಬ ವಿಚಾರಕ್ಕೆ ಕುರಿತಂತೆ ಇಂಡೋನೇಷ್ಯಾ, ಸೌದಿ ಅರೇಬಿಯಾ, ಯುಎಇ, ಜೋರ್ಡಾನ್, ಬಹ್ರೈನ್, ಕತಾರ್, ಒಮಾನ್, ಅಫ್ಘಾನಿಸ್ತಾನ, ಮಾಲ್ಡೀವ್ಸ್, ಇರಾನ್ ಮೊದಲಾದ ರಾಷ್ಟ್ರಗಳು ಭಾರತ ಸರ್ಕಾರದ ಮುಂದೆ ತಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದವು.
ಇದಾದ ಬಳಿಕ ಬಿಜೆಪಿ, ನೂಪುರ್ ಶರ್ಮಾರನ್ನು ಪಕ್ಷದ ಸದಸ್ಯತ್ವದಿಂದ ವಜಾ ಮಾಡಿದ್ದು, ನವೀನ್ ಜಿಂದಾಲ್ ರನ್ನು ಉಚ್ಚಾಟಿಸಲಾಗಿತ್ತು. ಅಲ್ಲದೇ ಇವರಿಬ್ಬರ ವಿರುದ್ದ ದೇಶದ ವಿವಿಧ ಕಡೆ ಹಲವರು ದೂರು ದಾಖಲಿಸಿದ್ದರು. ಇದಾದ ಬಳಿಕ ಭಾರತದ ಕ್ರಮಕ್ಕೆ ಇರಾನ್ ಮತ್ತು ಕತಾರ್ ತೃಪ್ತಿ ವ್ಯಕ್ತಪಡಿಸಿ ಹೇಳಿಕೆ ನೀಡಿದ್ದವು.
ಇದರ ಹೊರತಾಗಿಯೂ ಖಾಲಿದ್ ಬಿಡೋನ್, ಮೊಹಿನುದ್ದೀನ್ ಮತ್ತು ಆಲಿ ಸೊಹ್ರಾಬ್ ಮೊದಲಾದವರು ಭಾರತದ ವಿರುದ್ದ ತಮ್ಮ ದ್ವೇಶ ಕಾರುವುದನ್ನು ಮುಂದುವರೆಸಿದ್ದು, #BoycottIndianProduct ಹ್ಯಾಶ್ ಟ್ಯಾಗ್ ಜೊತೆಗೆ ಕಾಶ್ಮೀರ ವಿಷಯವನ್ನೂ ಎಳೆದು ತಂದಿದ್ದಾರೆ.