ಕಲಬುರಗಿ: ಪ್ರವಾದಿ ಮುಹಮ್ಮದ್ ಮತ್ತು ಇಸ್ಲಾಂ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಉತ್ತರ ಪ್ರದೇಶದ ದಾಸ್ನಾ ದೇವಾಲಯದ ಪೀಠಾಧಿಪತಿ ಯತಿ ನರಸಿಂಹಾನಂದ ಮಹಾರಾಜ ವಿರುದ್ಧ ಕಲಬುರಗಿಯ ಮೂರು ಪೊಲೀಸ್ ಠಾಣೆಗಳಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ರೋಜಾ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ನಯೀಮ್ ಖಾನ್ ದೂರು ದಾಖಲಿಸಿದ್ದಾರೆ. ಆರ್.ಜೆ. ನಗರ ಪೊಲೀಸ್ ಠಾಣೆಯಲ್ಲಿ ಖಿದ್ಮತ್ ಇ ಮಿಲ್ಲತ್ ಸದಸ್ಯ ಇಮ್ರಾನ್ ರಜ್ವಿ ಮಹಮ್ಮದ್ ಅಬ್ಬಾಸ್ ದೂರು ನೀಡಿದ್ದಾರೆ. ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಹಾಜಿ ಬಾಬಾ ಮಹಮದ್ ಹುಸೇನ್ ಅವರು ದೂರು ದಾಖಲಿಸಿದ್ದಾರೆ.
ಉತ್ತರಪ್ರದೇಶದ ಹಿಂದಿ ಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಯತಿ ನರಸಿಂಹಾನಂದ ಮಹಾರಾಜ ಅವರು ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆ ಬರುವ ರೀತಿ ಮಾತನಾಡಿದ್ದಾರೆ ಎಂದು ಆರೋಪಿಸಿದ್ದ ದೂರು ನೀಡಲಾಗಿದ್ದು, ಆರ್‌ಜಿನಗರ, ರೋಜಾ, ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಯತಿ ನರಸಿಂಹಾನಂದ ವಿರುದ್ಧ ಪ್ರಕರಣ ದಾಖಲಾಗಿವೆ.