ಬೆಂಗಳೂರು: ಆಸ್ತಿ ತೆರಿಗೆ ಪಾವತಿಯಲ್ಲಿ ವಿನಾಯಿತಿ, ದಂಡದ ಮೊತ್ತ ಕಡಿಮೆ ಮಾಡುವ ಕುರಿತು ಚರ್ಚೆ ನಡೆಯುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಗಾಂಧಿನಗರದ ಶಿರೂರು ಉದ್ಯಾನದಲ್ಲಿ ನಡೆದ ‘ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ, ತೆರಿಗೆ ಪಾವತಿ ಕುರಿತ ನೋಟಿಸ್, ದುಬಾರಿ ಮೊತ್ತದ ದಂಡದ ಬಗ್ಗೆ ದೂರುಗಳು ಬರುತ್ತಿವೆ. 30X40 ಅಳತೆಯ ನಿವೇಶನ, ಶೆಡ್ ಹೊಂದಿದವರಿಗೆ ಆಸ್ತಿ ತೆರಿಗೆ ವಿನಾಯಿತಿ, ದಂಡದ ಮೊತ್ತ ಕಡಿಮೆ ಮಾಡುವ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿದ್ದು, ಈ ಕುರಿತು ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಆಸ್ತಿ ತೆರಿಗೆ ಕುರಿತ ಕಾಯ್ದೆಯಿಂದ ದುಬಾರಿ ದಂಡ ವಿಧಿಸಲಾಗುತ್ತಿದೆ. ಕಾನೂನಿಗೆ ತಿದ್ದುಪಡಿ ತರುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಆಸ್ತಿ ತೆರಿಗೆ ಪಾವತಿ ಬಗ್ಗೆ ಜನರ ಮೇಲೆ ಒತ್ತಡ ಹೇರದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.