ಬೀದರ್: ರಾಜ್ಯದ ಎಲ್ಲಾ ನಗರ, ಪಟ್ಟಣಗಳಲ್ಲಿರುವ ಕಟ್ಟಡಗಳಿಗೆ ಇ- ಖಾತೆ ನೀಡುವ ಕುರಿತಾಗಿ ಪರಿಸರ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ.
ಗುರುವಾರ ಹಿರಿಯ ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್ ಅವರೊಂದಿಗೆ ಸಚಿವರು ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ನಗರ, ಪಟ್ಟಣಗಳಲ್ಲಿರುವ ಕಟ್ಟಡಗಳಿಗೆ ಇ- ಖಾತೆ ಮತ್ತು ಕಂದಾಯ ಭೂಮಿಯಲ್ಲಿ ನಕ್ಷೆ ಮಂಜೂರಾತಿ ಇಲ್ಲದೆ ನಿರ್ಮಿಸಿದ ಕಟ್ಟಡಗಳಿಗೆ ತೆರಿಗೆ ವಿಧಿಸುವ ಕುರಿತು ಚರ್ಚೆ ನಡೆಸಲಾಗಿದೆ.
ಬಿಬಿಎಂಪಿ ಕಾಯ್ದೆಯ ಅಂಶಗಳನ್ನು ರಾಜ್ಯದ ಉಳಿದ ಮಹಾನಗರ ಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳಿಗೆ ವಿಸ್ತರಿಸುವ ಕುರಿತು ಕರ್ನಾಟಕ ಮಹಾನಗರ ಪಾಲಿಕೆಗಳ ಕಾಯಿದೆ 1976, ಕರ್ನಾಟಕ ಪುರಸಭೆ ಕಾಯ್ದೆ 1964 ರಲ್ಲಿ ಅಳವಡಿಸಿಕೊಳ್ಳುವ ಕುರಿತ ಸಾಧಕ ಬಾಧಕ ಪರಿಶೀಲಿಸಲು ಸೂಕ್ತ ತೀರ್ಮಾನ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಲಾಗಿದೆ.
ಈ ಸಂಬಂಧ ರಚಿಸಲಾಗಿರುವ ಉಪಸಮಿತಿ ಅಧ್ಯಕ್ಷರಾದ ಈಶ್ವರ ಖಂಡ್ರೆ ಅವರು ಎಲ್ಲಾ ಸ್ಥಿರಾಸ್ತಿಗಳಿಗೆ ಇ- ಖಾತೆ ನೀಡುವ ನಿಟ್ಟಿನಲ್ಲಿ ಸಿದ್ಧವಾಗಿರುವ ಸಾಫ್ಟ್ವೇರ್ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 54.91 ಲಕ್ಷಕ್ಕೂ ಹೆಚ್ಚು ಆಸ್ತಿಗಳಿವೆ. ಇವುಗಳಲ್ಲಿ 20:55 ಲಕ್ಷ ಅಧಿಕೃತ ಆಸ್ತಿಗಳಾಗಿದ್ದು, ತೆರಿಗೆ ಪಾವತಿಸಲಾಗುತ್ತಿದೆ. ಅನಧಿಕೃತವಾಗಿ 34.35 ಲಕ್ಷಕ್ಕೂ ಅಧಿಕ ಆಸ್ತಿಗಳಿಗೆ ಯಾವುದೇ ತೆರಿಗೆ ವಿಧಿಸುತ್ತಿಲ್ಲ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಹೇಳಲಾಗಿದೆ.