ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನ ಜನತೆಗೆ ಆಸ್ತಿ ನೋಂದಣಿ ಪ್ರಕ್ರಿಯೆ ಇನ್ನು ಸುಲಭವಾಗಲಿದೆ. ಇದಕ್ಕಾಗಿ ಹೊಸ ಸಾಫ್ಟ್‌ವೇರ್ ಅನ್ನು ಪರಿಚಯಿಸಲು ಸರ್ಕಾರ ಯೋಜಿಸುತ್ತಿದ್ದು, ಜೂನ್‌ನಿಂದ ಬೆಂಗಳೂರಿನಲ್ಲಿ ಆಸ್ತಿ ನೋಂದಣಿ ಕಾರ್ಯ ನಡೆಯಬಹುದು.
ಕಾವೇರಿ-2 ಪೋರ್ಟಲ್ ಸಬ್-ರಿಜಿಸ್ಟ್ರಾರ್ ಕಛೇರಿಗಳಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ತರುವ ಮಧ್ಯವರ್ತಿಗಳ ಹಾವಳಿಯನ್ನು ತೊಡೆದುಹಾಕುವ ಮೂಲಕ ಈ ಕ್ರಮಕ್ಕೆ ಮುಂದಾಗಿದೆ. ವೆಬ್ ಆಧಾರಿತ ಅಪ್ಲಿಕೇಷನ್ ಇದಾಗಿದ್ದು, ಇದರಿಂದ ಸಾರ್ವಜನಿಕರ ಖರ್ಚು ಕಡಿಮೆ ಮಾಡಲು, ಸಮಯವನ್ನು ಉಳಿಸಲು ಸಾಧ್ಯವಾಗುತ್ತದೆ.
ಕರ್ನಾಟಕ ಸರ್ಕಾರದ ಇ-ಆಡಳಿತ ಇಲಾಖೆಯಡಿಯಲ್ಲಿ ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ ಅಭಿವೃದ್ಧಿಪಡಿಸಿದ ಈ ಪೋರ್ಟಲ್ ಅನ್ನು ಕಲಬುರಗಿ ಜಿಲ್ಲೆಯ ಚಿಂಚೋಳಿಯಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಿಸಲಾಯಿತು. ಪ್ರಸ್ತುತ ರಾಜ್ಯದಾದ್ಯಂತ 100 ಸಬ್-ರಿಜಿಸ್ಟ್ರಾರ್ ಕಚೇರಿಗಳು ಈಗ ಕಾವೇರಿ-2 ಸಾಫ್ಟ್‌ವೇರ್‌ನಲ್ಲಿ ಕಾರ್ಯನಿರ್ವಹಿಸುತ್ತಿವೆ.
ಜನರು ತಮ್ಮ ಹೆಬ್ಬೆರಳಿನ ಗುರುತನ್ನು ಮತ್ತು ಫೋಟೋವನ್ನು ಒದಗಿಸಲು ಒಮ್ಮೆ ಮಾತ್ರ ಅಪಾಯಿಂಟ್ಮೆಂಟ್ ತೆಗೆದುಕೊಳ್ಳಬೇಕು. ಇದಕ್ಕಾಗಿ ಸಬ್-ರಿಜಿಸ್ಟ್ರಾರ್ ಕಚೇರಿಗೆ ಭೇಟಿ ನೀಡಬೇಕು. ಇತರ ಎಲ್ಲಾ ಪ್ರಕ್ರಿಯೆಗಳನ್ನು ಆನ್‌ಲೈನ್‌ನಲ್ಲಿ ನಡೆಸಲಾಗುತ್ತಿದೆ. ಅಲ್ಲದೆ, ಪೋರ್ಟಲ್ ನಾಗರಿಕ ಸ್ನೇಹಿಯಾಗಿದೆ. ಇದುವರೆಗೆ 19,555 ಕ್ಕೂ ಹೆಚ್ಚು ಆಸ್ತಿಗಳನ್ನು ವ್ಯವಸ್ಥೆಯಡಿ ನೋಂದಾಯಿಸಲಾಗಿದ್ದು, 54.35 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ.
ನೋಂದಣಿ ಶುಲ್ಕವನ್ನು ನೇರವಾಗಿ ಖಜಾನೆಗೆ ವರ್ಗಾಯಿಸುವುದರಿಂದ ಯಾವುದೇ ಲಂಚ ಸ್ವೀಕಾರ ಮಾಡುವಂತಿಲ್ಲದೆ ಇರುವುದು ಬಹಳ ಉಪಯುಕ್ತವಾಗಿದೆ. ಹೊಸ ವ್ಯವಸ್ಥೆಯನ್ನು ನಾಗರಿಕರಿಗೆ ಪರಿಚಯಿಸಲು ಇಲಾಖೆಯು ಕೈಪಿಡಿಯನ್ನು ಬಿಡುಗಡೆ ಮಾಡಿದೆ ಮತ್ತು ಸಹಾಯವಾಣಿಯನ್ನು ಸಹ ನಡೆಸುತ್ತಿದೆ.