ಬೆಂಗಳೂರು: ಆಸ್ತಿ ಖರೀದಿದಾರರು ಮತ್ತು ಮಾರಾಟಗಾರರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಆಸ್ತಿ ನೋಂದಣಿಯ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹರಿಸಲು ಮುಂದಾಗಿರುವ ಸರ್ಕಾರ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಪಾಸ್ಪೋರ್ಟ್ ಕಚೇರಿ ಮಾದರಿಯ ಸೇವೆಯನ್ನು ನೀಡಲು ಮುಂದಾಗಿದೆ.
ಮನೆಯಲ್ಲೇ ಕುಳಿತು ಆಸ್ತಿ ದಾಖಲೆಗಳನ್ನು ಅಪ್ಲೋಡ್ ಮಾಡಬಹುದಾಗಿತ್ತು. ಅನುಕೂಲಕರವಾದ ದಿನದಲ್ಲಿ ನೋಂದಣಿಗೆ ಸಮಯ ದಿನ ಗೊತ್ತು ಮಾಡಿಕೊಳ್ಳಲು ಅವಕಾಶವಿದೆ.
ಆಸ್ತಿ ನೋಂದಣಿಯನ್ನು ಸುಲಭವಾಗಿಸಿ ಜನಸ್ನೇಹಿಯಾಗಿಸಲು ಕಾವೇರಿ 2 ತಂತ್ರಾಂಶ ರೂಪಿಸಲಾಗಿದ್ದು, ನವೆಂಬರ್ 1 ರಿಂದಲೇ ಆಸ್ತಿ ನೊಂದಣಿಗೆ ತಮಗೆ ಅನುಕೂಲವಾದ ನೋಂದಣಿಯ ದಿನ ಮತ್ತು ಸಮಯ ಆಯ್ಕೆ ಮಾಡಿಕೊಳ್ಳಬಹುದು. ಕಚೇರಿಗೆ ಆಗಮಿಸಿದ 20 ನಿಮಿಷದೊಳಗೆ ಆಸ್ತಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ಇದುವರೆಗೆ ಆಸ್ತಿ ನೋಂದಣಿಗೆ ದಾಖಲೆ ನೀಡಿ ಮುದ್ರಾಂಕ, ನೋಂದಣಿ ಶುಲ್ಕ ಪಾವತಿಸಿದ ನಂತರ ಸಮಯಕ್ಕಾಗಿ ವಾರಗಟ್ಟಲೆ ಕಾಯುವಂತಾಗಿತ್ತು. ಟೋಕನ್ ಆಧಾರದಲ್ಲಿ ನೋಂದಣಿ ಮಾಡಿಸಬೇಕಿತ್ತು. ತಾಂತ್ರಿಕ ಸಮಸ್ಯೆಗಳಿಂದ ಮತ್ತಷ್ಟು ವಿಳಂಬವಾಗುತ್ತಿತ್ತು.
ಈಗ ಪಾಸ್ಪೋರ್ಟ್ ಕಚೇರಿ ಮಾದರಿಯಲ್ಲಿ ಸೇವೆ ನೀಡಲು ಮುಂದಾಗಿದ್ದು, ಮನೆಯಲ್ಲಿಯೇ ಕುಳಿತು ಆಸ್ತಿ ದಾಖಲೆ ಅಪ್ಲೋಡ್ ಮಾಡಬಹುದು. ಇದಕ್ಕಾಗಿ ಪ್ರತಿ ಹಂತದಲ್ಲಿ ಮೊಬೈಲ್ ಸಂದೇಶ ಕಳುಹಿಸಲಾಗುವುದು. ಋಣಭಾರ ಪ್ರಮಾಣ ಪತ್ರ ಮತ್ತು ದೃಢೀಕೃತ ನಕಲುಗಳನ್ನು ಮೊಬೈಲ್ ಮೂಲಕ ಪಡೆದುಕೊಳ್ಳಬಹುದು. ಹೊಸ ತಂತ್ರಾಂಶದಿಂದ ವಿಳಂಬ ಮತ್ತು ಕಾಯುವಿಕೆ ಇಲ್ಲವಾಗುತ್ತದೆ. ಅಕ್ರಮ, ವಂಚನೆಗಳಿಗೂ ಕಡಿವಾಣ ಬೀಳಲಿದೆ ಎಂದು ಹೇಳಲಾಗಿದೆ.