ಬೆಂಗಳೂರು: ಆಸ್ತಿ ನೋಂದಣಿಗೆ ಶೇಕಡ 10 ರಷ್ಟು ರಿಯಾಯಿತಿ ನೀಡಿರುವುದನ್ನು ಮುಂದಿನ ಮೂರು ತಿಂಗಳ ಕಾಲ ವಿಸ್ತರಿಸಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಆಸ್ತಿ ನೋಂದಣಿಗೆ ರಿಯಾಯಿತಿ ನೀಡಿದ್ದರಿಂದ ರಾಜ್ಯದ ಬೊಕ್ಕಸಕ್ಕೆ ಹಣ ಹರಿದು ಬರುತ್ತಿದ್ದು, ನಿರೀಕ್ಷೆಗೂ ಮೀರಿ ಆದಾಯ ಸಂಗ್ರಹವಾಗಿದೆ. ಬಜೆಟ್ ನಲ್ಲಿ ಆಸ್ತಿ ನೋಂದಣಿ ಮೂಲಕ 14,000 ಕೋಟಿ ಸಂಗ್ರಹಿಸಲು ತೀರ್ಮಾನಿಸಿದ್ದು, ಅದನ್ನು 15 ಸಾವಿರ ಕೋಟಿ ರೂ.ಗೆ ಹೆಚ್ಚಳ ಮಾಡಲಾಗಿತ್ತು. ಮೊದಲ ಮೂರು ತಿಂಗಳಲ್ಲಿ ಐದೂವರೆ ಸಾವಿರ ಕೋಟಿ ರೂ. ನಷ್ಟು ಆದಾಯ ಸಂಗ್ರಹವಾಗಿದೆ ಎಂದು ಹೇಳಿದ್ದಾರೆ.
ಆಸ್ತಿ ನೋಂದಣಿ ಸರ್ವರ್ ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳಲಾಗಿದ್ದು, 406 ಕೋಟಿ ರೂ. ವೆಚ್ಚದಲ್ಲಿ ಸಬ್ ರಿಜಿಸ್ಟರ್ ಕಚೇರಿಗಳನ್ನು ಸಂಪೂರ್ಣ ಗಣಕೀಕರಣಗೊಳಿಸಲು ನಿರ್ಧರಿಸಲಾಗಿದೆ. ಆಸ್ತಿ ನೋಂದಣಿಗೆ ನೀಡಲಾಗಿದ್ದ ಶೇ. 10 ರಷ್ಟು ರಿಯಾಯಿತಿಯನ್ನು ಮುಂದಿನ 3 ತಿಂಗಳು ವಿಸ್ತರಿಸಲಾಗುವುದು ಎಂದು ಹೇಳಿದ್ದಾರೆ.