
ಬೆಂಗಳೂರು: ಆಸ್ತಿ ನೋಂದಣಿಗೆ ಶೀಘ್ರವೇ ಹೊಸ ತಂತ್ರಾಂಶ ಕಾವೇರಿ 2.0 ಜಾರಿ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ವಂಚನೆ ತಡೆದು, ಜನಸ್ನೇಹಿ ಸೇವೆ ನೀಡುವ ಉದ್ದೇಶದಿಂದ ಕಾವೇರಿ 2.0 ತಂತ್ರಾಂಶ ಅಭಿವೃದ್ದಿಪಡಿಸಲಾಗಿದೆ. ಮೂರು ತಿಂಗಳಲ್ಲಿ ರಾಜ್ಯಾದ್ಯಂತ ಸೇವೆ ಲಭ್ಯವಾಗಲಿದ್ದು, ಶೀಘ್ರದಲ್ಲಿಗೆ ದೊಡ್ಡಬಳ್ಳಾಪುರದಲ್ಲಿ ಅಧಿಕೃತವಾಗಿ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ.
ಇದರಿಂದ ನಕಲಿ ದಾಖಲೆ ನೀಡಿ ನೋಂದಣಿ ಪ್ರಕ್ರಿಯೆಗೆ ಕಡಿವಾಣ ಬೀಳಲಿದ್ದು, ಕಚೇರಿಗೆ ಬಂದು ದಿನವಿಡಿ ಕಾಯುವುದು ಕೂಡ ತಪ್ಪುತ್ತದೆ. ಮನೆಯಲ್ಲೇ ಕುಳಿತು ಸಂಬಂಧಿಸಿದ ದಾಖಲೆಗಳನ್ನು ಆನ್ಲೈನ್ ಮೂಲಕ ಸಲ್ಲಿಸಿ ನಿಗದಿಪಡಿಸಿದ ದಿನದಂದು ಕಚೇರಿಗೆ ಬಂದು ಭಾವಚಿತ್ರ ಹೆಬ್ಬಟ್ಟಿನ ಗುರುತು ನೀಡಿದ ನಂತರ ನೋಂದಣಿ ಮಾಡಲಾಗುವುದು. 10 ನಿಮಿಷದಲ್ಲಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಹೇಳಿದ್ದಾರೆ.
ನಾಗರೀಕರು ನೋಂದಣಿ ಕಚೇರಿಗೆ ಬರುವಾಗ ಮೊದಲು ಎಲ್ಲಾ ಡೇಟಾ ಮತ್ತು ದಾಖಲೆಗಳನ್ನು ಆನ್ಲೈನ್ ಮೂಲಕ ಅಪ್ಲೋಡ್ ಮಾಡಿ ಕಚೇರಿಗೆ ಸಲ್ಲಿಸಬೇಕು. ಇವುಗಳನ್ನು ಪರಿಶೀಲಿಸಿ ನಿಗದಿತ ಶುಲ್ಕ ಪಾವತಿಸಲು ತಿಳಿಸಲಾಗುತ್ತದೆ. ನಾಗರಿಕರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ನೋಂದಣಿ ಪ್ರಕ್ರಿಯೆ ದಿನಾಂಕ ಮತ್ತು ಸಮಯ ನಿಗದಿಪಡಿಸಬಹುದಾಗಿದೆ. ತಮ್ಮ ಭಾವಚಿತ್ರ ಹೆಬ್ಬೆರಳು ಗುರುತು ಸೆರೆಹಿಡಿಯುವ ಸಂದರ್ಭದಲ್ಲಿ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಡಿಜಿಟಲ್ ಸಹಿ ಮಾಡಿರುವ ದಸ್ತಾವೇಜನ್ನು ನಾಗರಿಕರ ಲಾಗಿನ್ ಗೆ ಮತ್ತು ಅವರ ಡಿಜಿ ಲಾಕರ್ ಖಾತೆಗೆ ಕಳುಹಿಸಲಾಗುವುದು. ದಸ್ತಾವೇಜಿನ ಮಾಹಿತಿಯನ್ನು ಸಂಬಂಧಿತ ಇಲಾಖೆಯ ಖಾತಾ ಬದಲಾವಣೆಗೆ ಕಳುಹಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ನೋಂದಣಿ ಕಚೇರಿಗಳನ್ನು ಪಾಸ್ಪೋರ್ಟ್ ಮಾದರಿ ಕಚೇರಿ ರೀತಿ ಸಿದ್ಧಪಡಿಸಲಾಗುವುದು. ವಿಶ್ರಾಂತಿ ಕೊಠಡಿ, ಕ್ಯಾಂಟೀನ್, ಲಿಫ್ಟ್ ಮೊದಲಾದ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.