
ಬೆಂಗಳೂರು: ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ 51,000 ಕುಟುಂಬಗಳಿಗೆ ಒಂದೇ ಬಾರಿಗೆ ಆಸ್ತಿಯ ಹಕ್ಕು ಪತ್ರಗಳನ್ನು ನೀಡಲಿದ್ದು, ಜನವರಿ 19ರಂದು ಕಲಬುರಗಿಯಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ತಾಂಡಾ, ಹಟ್ಟಿ, ಕಾಲೋನಿ ಮೊದಲಾದ ತಳ ಸಮುದಾಯಗಳ ಒಟ್ಟು 50,999 ಕುಟುಂಬಗಳಿಗೆ ಒಂದೇ ಬಾರಿಗೆ ಆಸ್ತಿಯ ಹಕ್ಕು ಪತ್ರ ವಿತರಿಸಲಾಗುವುದು. 51,000 ಕುಟುಂಬಗಳ ತಲಾ ಇಬ್ಬರಂತೆ ಒಂದು ಲಕ್ಷಕ್ಕೂ ಅಧಿಕ ಜನ ತಮ್ಮ ಸಾಂಪ್ರದಾಯಿಕ ಉಡುಗೆ ತೊಡುಗೆಗಳಲ್ಲಿ ಕಾರ್ಯಕ್ರಮಕ್ಕೆ ಆಗಮಿಸಲಿದ್ದು, ಇಷ್ಟೊಂದು ಬೃಹತ್ ಸಂಖ್ಯೆಯ ಫಲಾನುಭವಿಗಳಿಗೆ ಒಂದೇ ಸಲ ಹಕ್ಕು ಪತ್ರ ವಿತರಿಸುತ್ತಿರುವುದು ದಾಖಲೆಯಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಕುರುಬರಹಟ್ಟಿ, ಹಾಡಿ, ಲಂಬಾಣಿ ತಾಂಡಾ, ಕ್ಯಾಂಪ್, ಕಾಲೋನಿ, ಗೊಲ್ಲರಹಟ್ಟಿ ಸೇರಿದಂತೆ ಸಾವಿರಾರು ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಘೋಷಣೆ ಮಾಡಿ ಅವರು ವಾಸಿಸುವ ಜಾಗದ ಮೇಲೆ ಹಕ್ಕು ನೀಡಲು ಹಕ್ಕು ಪತ್ರ ವಿತರಿಸಲಾಗುತ್ತಿದೆ. ಒಂದೇ ಸಲ 51 ಸಾವಿರ ಕುಟುಂಬಗಳಿಗೆ ಹಕ್ಕುಪತ್ರ ನೀಡುತ್ತಿರುವುದು ದಾಖಲೆಯಾಗಿದೆ ಎಂದು ಹೇಳಿದ್ದಾರೆ.