ಬೆಂಗಳೂರು: ಬೆಂಗಳೂರಿನಲ್ಲಿ ಇ- ಖಾತೆ ಪಡೆಯಲು ಬಿಬಿಎಂಪಿಯ ಯಾವುದೇ ಅಧಿಕಾರಿಗಳನ್ನು ಭೇಟಿ ಮಾಡುವ ಅವಶ್ಯಕತೆ ಇಲ್ಲ. ಆನ್ಲೈನ್ ನಲ್ಲಿ ಅಗತ್ಯ ದಾಖಲೆ ಸಲ್ಲಿಸಿ ಇ- ಖಾತೆ ಪಡೆದುಕೊಳ್ಳಬಹುದು ಎಂದು ಹೇಳಲಾಗಿದೆ.
ಬಿಬಿಎಂಪಿ ಬಳಿ ಲಭ್ಯ ಇರುವ ಸುಮಾರು 21 ಲಕ್ಷ ಎ, ಬಿ ಖಾತೆಗಳ ಆಸ್ತಿಗಳ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗಿದೆ. ಸಾರ್ವಜನಿಕರು http://bbmpeaasthi.Karnataka.gov.in ಲಿಂಕ್ ಮೂಲಕ ಕರಡು ಇ-ಖಾತಾ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
ಅಂತಿಮ ಇ -ಖಾತಾವನ್ನು ಪಡೆಯಲು ಬಿಬಿಎಂಪಿಯಲ್ಲಿ ಯಾರನ್ನು ಭೇಟಿ ಮಾಡುವ ಅವಶ್ಯಕತೆ ಇರುವುದಿಲ್ಲ. ಇದು ಸಂಪೂರ್ಣವಾಗಿ ಆನ್ಲೈನ್ ವ್ಯವಸ್ಥೆ ಮತ್ತು ಸಂಪರ್ಕ ರಹಿತವಾಗಿದೆ. ಇ- ಖಾತೆ ಪಡೆಯಲು ಕಾವೇರಿ ತಂತ್ರಾಂಶ ಮೂಲಕ ಪಡೆಯುವ ಕ್ರಯ ಪತ್ರ ಅಥವಾ ನೋಂದಾಯಿತ ಪತ್ರದ ಸಂಖ್ಯೆ, 2004ರ ಏಪ್ರಿಲ್ 1ರಿಂದ ಈವರೆಗಿನ ಸ್ವತ್ತಿನ ಋಣಭಾರ ಪ್ರಮಾಣ ಪತ್ರ ಹಾಗೂ ಋಣ ಭಾರ ಪ್ರಮಾಣ ಪತ್ರ ಸಂಖ್ಯೆಯನ್ನು ನಮೂದಿಸಬೇಕು.
ಆಸ್ತಿ ತೆರಿಗೆಯ 10 ಅಂಕಿಯ ಅರ್ಜಿ ಸಂಖ್ಯೆಯನ್ನು ನಮೂದಿಸಿ ಮಾಹಿತಿಯನ್ನು ವಿದ್ಯುನ್ಮಾನವಾಗಿ ಪಡೆಯಲಾಗುವುದು. ಮಾಲೀಕರ ಆಧಾರ್ ಇ-ಕೆವೈಸಿ, ಬೆಸ್ಕಾಂನ 10 ಅಂಕಿಯ ಖಾತಾ ಸಂಖ್ಯೆ ನಮೂದಿಸಿ ಮಾಹಿತಿಯನ್ನು ವಿದ್ಯುನ್ಮಾನವಾಗಿ ಪರಿಶೀಲಿಸಲಾಗುತ್ತದೆ.
ಆಸ್ತಿಯ ಜಿಪಿಎಸ್ ಫೋಟೋ ಎ ಖಾತಾದ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ತಿಳಿಸಿದ ವಿವರಗಳನ್ನು ವಿದ್ಯುನ್ಮಾನವಾಗಿ ಒದಗಿಸಿದ ನಂತರ ತಂತ್ರಾಂಶ ಸ್ವತಃ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಸ್ವಯಂ ಚಾಲಿತವಾಗಿ ಅಂತಿಮ ಇ- ಖಾತೆ ನೀಡುತ್ತದೆ ಎಂದು ಹೇಳಲಾಗಿದೆ.