ಬೆಂಗಳೂರು: ಆಸ್ತಿ ಹಂಚಿಕೆ ವಿಚಾರವಾಗಿ ಅಣ್ಣನೇ ತಂಗಿಯನ್ನು ಹತ್ಯೆ ಮಾಡಿಸಿದ ಘಟನೆ ಬೆಂಗಳೂರಿನ ಹೈಗ್ರೌಂಡ್ಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಚಾಮರಾಜಪೇಟೆಯ ಸೋಮಿನಿ ಸತ್ಯಭಾಮ(49) ಹತ್ಯೆಗೀಡಾದವರು. ಕೊಲೆ ಆರೋಪಿಗಳಾದ ಸತ್ಯಭಾಮ ಸೋದರ ಶಿವಶಂಕರ್(64), ಆತನ ಪತ್ನಿ ಗಾಯತ್ರಿ ದೇವಿ, ಮಕ್ಕಳಾದ ಸಾಗರ್, ದಿಲೀಪ್, ಪೂಜಾ ಮತ್ತು ಸಂಬಂಧಿ ಆಕಾಶ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಸತ್ಯಭಾಮ ಹಾಗೂ ಶಿವಶಂಕರ್ ಒಡಹುಟ್ಟಿದವರಾಗಿದ್ದು, ಚಾಮರಾಜಪೇಟೆಯಲ್ಲಿ ಪಿತ್ರಾರ್ಜಿತ ಆಸ್ತಿ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಸತ್ಯಭಾಮ ಕೊಲೆಗೆ ಸಂಚು ರೂಪಿಸಿದ್ದ ಶಿವಶಂಕರ್ ತನ್ನ ಮಕ್ಕಳಿಗೆ ಕೊಲೆ ಮಾಡಲು ಸೂಚಿಸಿದ್ದ. ಇದಕ್ಕೆ ಸಂಬಂಧಿ ಆಕಾಶ್ ಸಾಥ್ ನೀಡಿದ್ದ.
ಐಟಿಸಿ ವಿಂಡ್ಸರ್ ಮ್ಯಾನರ್ ಹೋಟೆಲ್ ನಲ್ಲಿ ಸ್ಟಾಫ್ ನರ್ಸ್ ಆಗಿರುವ ಸತ್ಯಭಾಮ ಜೂನ್ 11ರಂದು ಸಂಜೆ ಕೆಲಸ ಮುಗಿಸಿ ನಡೆದುಕೊಂಡು ಹೋಗುವಾಗ ಸಾಗರ್ ಮತ್ತು ಆಕಾಶ್ ಬೈಕ್ ನಲ್ಲಿ ಹಿಂಬಾಲಿಸಿಕೊಂಡು ಬಂದು ಮಾರಕಾಸ್ತ್ರದಿಂದ ಹೊಡೆದು ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸತ್ಯಭಾಮ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಈ ವೇಳೆಗಾಗಲೇ ಅವರು ಮೃತಪಟ್ಟಿದ್ದರು. ಮೃತರ ಪುತ್ರ ಅನಿಲ್ ಕುಮಾರ್ ನೀಡಿದ ದೂರು ಆಧರಿಸಿ ತನಿಖೆ ಕೈಗೊಂಡ ಪೊಲೀಸರು ಆಕಾಶ್ ಮತ್ತು ದಿಲೀಪ್ ನನ್ನು ಬಂಧಿಸಿದ್ದರು. ಬಳಿಕ ತನಿಖೆ ನಡೆಸಿ ಶಿವಶಂಕರ್ ಕುಟುಂಬದವರು ಕೊನೆಗೆ ಸಂಚು ರೂಪಿಸಿದ್ದರಿಂದ ಅವರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.