ಯಾದಗಿರಿ: ಬಿಬಿಎಂಪಿ ವ್ಯಾಪ್ತಿಯಲ್ಲಿ ನೀಡಿರುವ ಮಾದರಿಯಲ್ಲಿಯೇ ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ನಿಯಮ ಉಲ್ಲಂಘಿಸಿದ ಕಟ್ಟಡಗಳಿಗೆ ದುಪ್ಪಟ್ಟು ಶುಲ್ಕ ವಿಧಿಸಿ ಎ ಮತ್ತು ಬಿ ಖಾತಾ ನೀಡಲು ತಿಂಗಳೊಳಗೆ ಆದೇಶ ಹೊರಡಿಸಲಾಗುವುದು ಎಂದು ಪೌರಾಡಳಿತ ಸಚಿವ ರಹೀಂ ಖಾನ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಖಾತಾ ನೀಡುವ ವಿಚಾರದಲ್ಲಿ ಸಂಪುಟದ ತೀರ್ಮಾನಕ್ಕೆ ರಾಜ್ಯಪಾಲರ ಅನುಮೋದನೆ ದೊರೆತಿದ್ದು, ಆಕ್ಷೇಪಣೆ ಆಹ್ವಾನಿಸಲಾಗಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಪರವಾನಿಗೆ ಪಡೆದುಕೊಳ್ಳದೆ ನಿರ್ಮಾಣ ಮಾಡಿದ ಗೃಹ ಮತ್ತು ವಾಣಿಜ್ಯ ಕಟ್ಟಡಗಳು ನಗರಸಭೆಯಲ್ಲಿ ನೋಂದಣಿಯಾಗಿಲ್ಲದಿರುವುದರಿಂದ ಶೇಕಡ 50ಕ್ಕೂ ಅಧಿಕ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗುತ್ತಿಲ್ಲ. 15ನೇ ಹಣಕಾಸು ಯೋಜನೆಯಡಿ ಪ್ರಯೋಜನ ಪಡೆದುಕೊಳ್ಳಲು ಶೇಕಡ 50ಕ್ಕಿಂತ ತೆರಿಗೆ ಸಂಗ್ರಹಿಸಬೇಕಿದೆ. ಈ ನಿಟ್ಟಿನಲ್ಲಿ ಬಿಬಿಎಂಪಿ ಮಾದರಿಯಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ನಿಯಮ ಉಲ್ಲಂಘಿಸಿದ ಕಟ್ಟಡಗಳಿಗೆ ದುಪ್ಪಟ್ಟು ಶುಲ್ಕ ವಿಧಿಸಿ ಎ ಮತ್ತು ಬಿ ಖಾತಾ ನೀಡಲು ತಿಂಗಳೊಳಗೆ ಆದೇಶ ಹೊರಡಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.