ಬೆಂಗಳೂರು: ಭೂದಾಖಲೆಗಳ ಅಕ್ರಮ ತಡೆಗೆ ಮತ್ತು ಸುಗಮ ನಿರ್ವಹಣೆಗಾಗಿ ಏಕೀಕೃತ ನಿರ್ವಹಣಾ ವ್ಯವಸ್ಥೆ ಜಾರಿಗೆ ತರಲು ಕಂದಾಯ ಇಲಾಖೆ ಸಿದ್ಧತೆ ಕೈಗೊಂಡಿದ್ದು, ಒಂದು ಆಸ್ತಿಗೆ ಒಂದು ನಂಬರ್ ನೀಡಲು ಮುಂದಾಗಿದೆ.
ಆಧಾರ್ ಮಾದರಿಯಲ್ಲಿ ಏಕೀಕೃತ ನಿರ್ವಹಣ ವ್ಯವಸ್ಥೆ ನಂಬರ್ ನೀಡಲಾಗುತ್ತದೆ. ಭೂಮಿಯ ಸ್ವಾಧೀನತೆ ಬಗ್ಗೆ ನಿಖರವಾದ ಮಾಹಿತಿಗಾಗಿ ಈ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಒತ್ತುವರಿ, ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುವಂತಹ ಅಕ್ರಮಗಳಿಗೆ ಕಡಿವಾಣ ಹಾಕಬಹುದಾಗಿದೆ. ಶೀಘ್ರವೇ ಒಂದು ಆಸ್ತಿಗೆ ಒಂದು ನಂಬರ್ ನಿಯಮ ಜಾರಿಗೆ ಬರಲಿದೆ.
ಪ್ರತಿ ಜಮೀನಿಗೆ ಆಧಾರ್ ಮಾದರಿಯ ವಿಶಿಷ್ಟ ಗುರುತಿನ ಸಂಖ್ಯೆ ನೀಡಲಾಗುತ್ತದೆ. ಇದರ ಅಡಿಯಲ್ಲಿ ಜಮೀನಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ನಮೂದಿಸಲಾಗುತ್ತದೆ. ಜಮೀನಿನ ಎಲ್ಲ ಮಾಹಿತಿಗಳು ಒಂದೇ ಕಡೆ ಸಿಗಲಿದೆಯಲ್ಲದೇ, ಅಕ್ರಮಕ್ಕೆ ಕಡಿವಾಣ ಹಾಕಬಹುದಾಗಿದೆ.
ಇದರಿಂದಾಗಿ ರಾಜ್ಯದ ಜನತೆಗೆ ಅನುಕೂಲವಾಗುತ್ತದೆ. ಆಸ್ತಿ ಖರೀದಿ, ಮಾರಾಟ, ಗೃಹಸಾಲ ಪಡೆಯಲು ಅನುಕೂಲವಾಗುತ್ತದೆ. ಜಮೀನು ವಿಚಾರವಾಗಿ ಕಾರ್ಯನಿರ್ವಹಿಸುವ ಎಲ್ಲಾ ಇಲಾಖೆಗಳ ಮಾಹಿತಿ ಒಂದೇ ತಂತ್ರಾಂಶದಲ್ಲಿ ಲಭ್ಯವಿರುತ್ತದೆ. ನಿವೇಶನ, ಜಮೀನು ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುವುದನ್ನು ತಡೆಯಬಹುದು. ಖರೀದಿಸುವ ಜಮೀನು, ಕಟ್ಟಡ, ನಿವೇಶನ ಯಾರ ಮಾಲೀಕತ್ವದಲ್ಲಿದೆ ಎಂಬುದನ್ನು ತಿಳಿಯಬಹುದಾಗಿದೆ.