
ಕಂದಾಯ ಇಲಾಖೆಯನ್ನು ಮತ್ತಷ್ಟು ಜನಸ್ನೇಹಿಯಾಗಿಸಲು ಸರ್ಕಾರ ಮುಂದಾಗಿದೆ. ಆಸ್ತಿ ನೋಂದಣಿ ಮತ್ತು ಪೌತಿ ಖಾತೆಯ ಆಕ್ಷೇಪಣೆ ಅವಧಿಯನ್ನು ಕಡಿತಗೊಳಿಸಲು ಸರ್ಕಾರ ಮುಂದಾಗಿದೆ.
ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಒಬ್ಬರ ಹೆಸರಿನಿಂದ ಮತ್ತೊಬ್ಬರ ಹೆಸರಿಗೆ ಆಸ್ತಿ ನೋಂದಣಿ ಆದ ನಂತರ ಖಾತೆ ಬದಲಾವಣೆಯಾಗಲು 35 ದಿನ ಕಾಯಬೇಕು. ಪೌತಿ ಖಾತೆಯಡಿ ಆಸ್ತಿ ವರ್ಗಾವಣೆಯಾದಾಗಲೂ 45 ದಿನ ಕಾಯಬೇಕು. ಇದರ ಅವಧಿಯನ್ನು ಕಡಿತಗೊಳಿಸಲು ಸರ್ಕಾರ ಮುಂದಾಗಿದೆ.
ಆಸ್ತಿ ನೋಂದಣಿಗೆ ಹಾಲಿ ಆಕ್ಷೇಪಣೆ ಅವಧಿ 35 ದಿನಗಳಿದ್ದು, ಇದನ್ನು 7 ದಿನಕ್ಕೆ ಇಳಿಕೆ ಮಾಡಲು ಚಿಂತನೆ ನಡೆದಿದೆ. ಪೌತಿ ಖಾತೆ ವರ್ಗಾವಣೆಗೆ ಆಕ್ಷೇಪಣೆ ಅವಧಿ 45 ದಿನಗಳಿದ್ದು, ಇದನ್ನು 15 ದಿನಕ್ಕೆ ಇಳಿಕೆ ಮಾಡಲು ಸರ್ಕಾರ ನಿರ್ಧರಿಸಿದೆ.
ಆಸ್ತಿಯನ್ನು ಕುಟುಂಬದ ಸದಸ್ಯರ ಗಮನಕ್ಕೆ ಬರದಂತೆ ಮತ್ತು ಆಸ್ತಿಯಲ್ಲಿ ಪಾಲು ಹೊಂದಿದವರಿಗೆ ಗೊತ್ತಾಗದಂತೆ ಮಾರಾಟ ಮಾಡಿದ ಸಂದರ್ಭದಲ್ಲಿ ಆಕ್ಷೇಪಣೆ ಸಲ್ಲಿಸಲು ಒಂದು ತಿಂಗಳಿಗೂ ಹೆಚ್ಚಿನ ಅವಧಿ ನೀಡಲಾಗಿದೆ. ಇದನ್ನು ಇಳಿಕೆ ಮಾಡಲು ಸರ್ಕಾರ ತೀರ್ಮಾನಿಸಿದೆ. ಕಂದಾಯ ಇಲಾಖೆಯಿಂದ 50 ವರ್ಷಗಳ ಹಿಂದೆ ಕಾನೂನು ರೂಪಿಸಿದ ಸಂದರ್ಭದಲ್ಲಿ ಸಮರ್ಪಕ ಸಂಚಾರ, ಸಂಪರ್ಕ ವ್ಯವಸ್ಥೆ ಇರಲಿಲ್ಲ. ಈಗ ಜನರಿಗೆ ಶೀಘ್ರವೇ ಮಾಹಿತಿ ತಲುಪುತ್ತದೆ. ಹೀಗಾಗಿ 50 ವರ್ಷಗಳ ಹಿಂದಿನ ಕಾನೂನು ಮಾರ್ಪಡಿಸಿ ಆಸ್ತಿ ನೋಂದಣಿ ಮತ್ತು ಪೌತಿ ಖಾತೆಯ ಆಕ್ಷೇಪಣೆ ಅವಧಿಯನ್ನು ಕಡಿತಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗಿದೆ.