ಬೆಂಗಳೂರು : ಆಸ್ತಿ ಖರೀದಿ, ಮಾರಾಟಗಾರರಿಗೆ ಬಿಗ್ ಶಾಕ್, ಅಕ್ಟೋಬರ್ 1 ರ ಇಂದಿನಿಂದ ಆಸ್ತಿ ನೋಂದಣಿ ಮಾರ್ಗಸೂಚಿ ದರ ಶೇ.30 ರಷ್ಟು ಹೆಚ್ಚಳವಾಗಲಿದೆ. ಇಂದಿನಿಂದ ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗಸೂಚಿ ದರ ಜಾರಿಯಾಗಲಿದ್ದು, ಹಳೇ ದರಗಳಲ್ಲಿ ನಡೆಯುತ್ತಿದ್ದ ನೋಂದಣಿ ಪ್ರಕ್ರಿಯೆ ಸ್ಥಗಿತವಾಗಿದೆ.
ಕಂದಾಯ ಇಲಾಖೆಯ ನಿಯಮಾವಳಿ ಪ್ರಕಾರ ಪ್ರತಿವರ್ಷ ಆಸ್ತಿ ನೋಂದಣಿ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಬೇಕು ಎಂದು ಇದೆ. ಆದರೆ, ಹಲವು ವರ್ಷಗಳಿಂದ ದರ ಏರಿಕೆ ಮಾಡಿರಲಿಲ್ಲ. ಹಾಗಾಗಿ ಅ.1 ರಿಂದ ಮಾರ್ಗಸೂಚಿ ದರ ಹೆಚ್ಚಳ ಮಾಡಲಿದ್ದೇವೆ, ರಾಜ್ಯದಲ್ಲಿ ಮಾರ್ಗಸೂಚಿ ದರ ಏರಿಕೆಯಾದರೆ ವರ್ಷಕ್ಕೆ 2000 ಕೋಟಿ ರೂ ಆದಾಯ ಬರುತ್ತೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಇತ್ತೀಚೆಗೆ ಹೇಳಿಕೆ ನೀಡಿದ್ದರು. ರಾಜ್ಯದಲ್ಲಿ ಎಲ್ಲಾ ಕಡೆ ಮಾರ್ಗಸೂಚಿ ದರ ಏರಿಕೆ ಆಗಲ್ಲ. ಕೆಲವು ಕಡೆ ಮಾರುಕಟ್ಟೆ ದರಕ್ಕಿಂತ ಮಾರ್ಗಸೂಚಿ ದರ ಹೆಚ್ಚಳ ಇದ್ದರೆ, ಅಂತಹ ಪ್ರದೇಶಗಳಲ್ಲಿ ದರ ಹೆಚ್ಚಳವಾಗುವುದಿಲ್ಲ ಎಂದಿದ್ದರು.
ಇನ್ನೂ, ಆಸ್ತಿ ನೋಂದಣಿ ಸೇರಿದಂತೆ ಇತರೆ ಪ್ರಕ್ರಿಯೆಗಳಿಗೆ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿಯಿಲ್ಲದೆ ಆಸ್ತಿದಾರರೇ ಬಯಸಿದ ದಿನ, ಸಮಯಕ್ಕೆ ಆಸ್ತಿ ನೋಂದಣಿ ಮಾಡಿಕೊಳ್ಳುವ, ಆನ್ಲೈನ್ನಲ್ಲೇ ಶುಲ್ಕ ಪಾವತಿ ವ್ಯವಸ್ಥೆಯಿರುವ ‘ಕಾವೇರಿ 2.0’ ತಂತ್ರಾಂಶವು ಈಗಾಗಲೇ ಅಳವಡಿಕೆಯಾಗಿದೆ.