ಬೆಂಗಳೂರು: ವರದಕ್ಷಿಣೆಯಾಗಿ ನೀಡಲಾದ ಆಸ್ತಿಗಳನ್ನು ಹಿಂದೂ ಉತ್ತರಾಧಿಕಾರ ಕಾಯ್ದೆಯಡಿ ಮಗಳು ಹೂಡಿದ ವಿಭಜನಾ ಮೊಕದ್ದಮೆಯಲ್ಲಿ ಸೇರಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.
ಪುತ್ರಿಯ ಆಸ್ತಿ ವಿಭಜನೆ ದಾವೆಯಲ್ಲಿ ವರದಕ್ಷಿಣೆಯಾಗಿ ನೀಡಿದ ಆಸ್ತಿಯನ್ನು ಕೂಡ ಸೇರ್ಪಡೆ ಮಾಡಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ. ಹಿಂದೂ ಉತ್ತರದಾಯಿತ್ವ ಕಾಯ್ದೆಯ ಪ್ರಕಾರ ಬೆಂಗಳೂರಿನ ಮಹಿಳೆ ಸಲ್ಲಿಸಿದ್ದ ಪ್ರಕರಣದಲ್ಲಿ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ, ವರದಕ್ಷಿಣೆಯಾಗಿ ನೀಡಿದ ಆಸ್ತಿಯನ್ನು ಕೂಡ ಆಸ್ತಿ ವಿಭಜನೆ ದಾವೆಯಲ್ಲಿ ಸೇರ್ಪಡೆ ಮಾಡುವಂತೆ ಆದೇಶಿಸಿದೆ.
ಮದುವೆಯ ಸಂದರ್ಭದಲ್ಲಿ ಸಹೋದರಿಗೆ ಎರಡು ಆಸ್ತಿಗಳನ್ನು ನೀಡಿದ್ದು, ಈ ಆಸ್ತಿಗಳನ್ನು ಕೂಡ ಆಸ್ತಿ ವಿಭಜನೆ ದಾವೆಯಲ್ಲಿ ಸೇರಿಸಬೇಕು ಎಂದು ಅರ್ಜಿದಾರರ ಸಹೋದರರು ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ನಲ್ಲಿ ದಾವೆ ಹೂಡಿದ್ದರು. ನ್ಯಾಯಾಲಯ ಅವರ ಅರ್ಜಿಯನ್ನು ಮಾನ್ಯ ಮಾಡಿ, ವರದಕ್ಷಿಣೆಯಾಗಿ ನೀಡಿದ್ದ ಆಸ್ತಿಗಳನ್ನು ಕೂಡ ಆಸ್ತಿ ವಿಭಜನೆ ದಾವೆಗೆ ಸೇರಿಸುವಂತೆ 2018 ರ ಆಗಸ್ಟ್ 8 ರಂದು ತೀರ್ಪು ನೀಡಿತ್ತು. ಸಿಟಿ ಸಿವಿಲ್ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.
ವಿಚಾರಣೆ ನಡೆಸಿದ ಹೈಕೋರ್ಟ್ ಹಿಂದೂ ಉತ್ತರದಾಯಿತ್ವ ಕಾಯ್ದೆ ಸೆಕ್ಷನ್ 6 ರಲ್ಲಿ ಉಲ್ಲೇಖಿಸಿದಂತೆ ಆಸ್ತಿ ವಿಭಜನೆ ದಾವೆಯಲ್ಲಿ ಇರುವ ಆಸ್ತಿ ಕುಟುಂಬದ ಜಂಟಿ ಆಸ್ತಿಯಾಗಿರುತ್ತದೆ. ಇದರಲ್ಲಿ ಮದುವೆ ಸಂದರ್ಭದಲ್ಲಿ ನೀಡಲಾದ ವರದಕ್ಷಿಣೆ, ಉಡುಗೊರೆ, ಆಸ್ತಿಗಳು ಕೂಡ ಒಳಗೊಂಡಿರುತ್ತದೆ ಎಂದು ಆದೇಶಿಸಿದ್ದು, ಆಸ್ತಿ ವಿಭಜನೆ ದಾವೆಯಲ್ಲಿ ವರದಕ್ಷಿಣೆಯಾಗಿ ನೀಡಿದ ಆಸ್ತಿಗಳನ್ನು ಕೂಡ ಸೇರ್ಪಡೆ ಮಾಡಬೇಕೆಂದು ಹೇಳಲಾಗಿದೆ.