ಬೆಂಗಳೂರು: ಶಿಕ್ಷಣ ಇಲಾಖೆ ವೃಂದ ಮತ್ತು ನೇಮಕಾತಿ ನಿಯಮ ರೂಪಿಸಿ ಬಿಡುಗಡೆ ಮಾಡಿದ್ದು, ಶಿಕ್ಷಕರ ಬಡ್ತಿ ನೀಡಲು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ. ಆರರಿಂದ ಎಂಟನೇ ತರಗತಿ ಬೋಧಕರ ನೇಮಕಾತಿಗೆ ಅನ್ವಯವಾಗುವಂತೆ ನಿಯಮ ರೂಪಿಸಲಾಗಿದೆ. ಹೊಸ ನೇಮಕಾತಿಯೊಂದಿಗೆ ಬಡ್ತಿ ನೀಡುವ ಸಂದರ್ಭದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ಕಡ್ಡಾಯವಾಗಿ ನಡೆಸಬೇಕು ಎಂದು ಹೇಳಲಾಗಿದೆ.
2017ರಲ್ಲಿ ನಿಯಮ ರೂಪಿಸಿದ್ದು, 2021ರಲ್ಲಿ ನಿಯಮಕ್ಕೆ ತಿದ್ದುಪಡಿ ತಂದು ಹೊಸ ನೇಮಕಾತಿ ನಿಯಮ ಜಾರಿಗೊಳಿಸಲಾಗಿದೆ. ಈ ಹಿಂದೆ ನೇಮಕವಾಗಿ ಪ್ರಾಥಮಿಕ ಶಾಲೆ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು 75,000 ಶಿಕ್ಷಕರು ಪದವಿ ಪೂರ್ಣಗೊಳಿಸಿದ್ದು, ಅವರಿಗೆ ಆರರಿಂದ ಎಂಟನೇ ತರಗತಿಗೆ ಬೋಧನೆ ಮಾಡಲು ಬಡ್ತಿ ನೀಡಬೇಕೆಂಬ ಬೇಡಿಕೆ ಇದೆ. ಈ ಬಡ್ತಿ ಪ್ರಮಾಣವನ್ನು ಶೇಕಡ 25 ರಿಂದ 33 ಕ್ಕೆ ಹೆಚ್ಚಳ ಮಾಡಲಾಗಿದ್ದು, ಬಡ್ತಿ ನೀಡುವ ಸಂದರ್ಭದಲ್ಲಿ ಆಯ್ಕೆ ಪ್ರಾಧಿಕಾರದ ನಿಯಮಾನುಸಾರ ಸ್ಪರ್ಧಾತ್ಮಕ ಪರೀಕ್ಷೆ ನಡೆಸಬೇಕು ಎಂದು ಹೇಳಲಾಗಿದೆ. ಆದರೆ, ಪದವೀಧರ ಶಿಕ್ಷಕರ ವಲಯದಿಂದ ಬಡ್ತಿ ನೀಡಲು ಸ್ಪರ್ಧಾತ್ಮಕ ಪರೀಕ್ಷೆ ಬೇಡವೆಂಬ ಅಭಿಪ್ರಾಯ ಕೇಳಿಬಂದಿದೆ.