ಬೆಂಗಳೂರು: ಪ್ರಾಥಮಿಕ ಶಾಲಾ ಶಿಕ್ಷಕರ ಬಡ್ತಿ ಪ್ರಕ್ರಿಯೆ ಮತ್ತೆ ವಿಳಂಬವಾಗಿದೆ. ಸಹಶಿಕ್ಷಕರು ಮತ್ತು ಮುಖ್ಯ ಶಿಕ್ಷಕರಿಗೆ ಬಡ್ತಿ ನೀಡುವ ಕುರಿತಾಗಿ ಹೊಸ ವೃಂದ ಮತ್ತು ನೇಮಕ ನಿಯಮಾವಳಿ ರಚನೆಯಾಗಬೇಕಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಬಡ್ತಿ ದೊರೆಯುವ ಸಾಧ್ಯತೆ ಇಲ್ಲವಾಗಿದೆ.
ಆದೇಶ ಉಲ್ಲಂಘಿಸಿ ಸಹ ಶಿಕ್ಷಕರಿಂದ ಮುಖ್ಯ ಶಿಕ್ಷಕರ ಹುದ್ದೆಗೆ, ಮುಖ್ಯ ಶಿಕ್ಷಕರಿಂದ ಹಿರಿಯ ಮುಖ್ಯ ಶಿಕ್ಷಕರ ಹುದ್ದೆಗೆ ಕೌನ್ಸೆಲಿಂಗ್ ಮೂಲಕ ಬಡ್ತಿ ನೀಡಲು ಮುಂದಾಗಿದ್ದ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಕರ್ನಾಟಕ ಆಡಳಿತ ನ್ಯಾಯಮಂಡಳಿ ನೋಟಿಸ್ ನೀಡಿದ್ದು, ಮಾರ್ಚ್ 22 ರವರಿಗೆ ಉತ್ತರಿಸಲು ಸೂಚನೆ ನೀಡಲಾಗಿದೆ.
ಫೆಬ್ರವರಿ 13 ರಿಂದ 26ರೊಳಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕೌನ್ಸೆಲಿಂಗ್ ನಡೆಸಲು ವೇಳಾಪಟ್ಟಿ ಪ್ರಕಟಿಸಿದ್ದು, ಇದನ್ನು ಪದವೀಧರ ಪ್ರಾಥಮಿಕ ಶಿಕ್ಷಕ ಕೆ.ಎಂ.ದೊರೆಸ್ವಾಮಿ ಹಾಗೂ ಇತರರು ಕೆಎಟಿಯಲ್ಲಿ ಪ್ರಶ್ನಿಸಿ ನ್ಯಾಯಾಂಗ ನಿಂದನೆ ದಾವೆ ಹೂಡಿದ್ದರು. ಇದರ ಪರಿಣಾಮ ನೋಟಿಸ್ ಜಾರಿ ಮಾಡಿದ್ದು, ಮಾರ್ಚ್ 22 ರ ಒಳಗೆ ಉತ್ತರಿಸಲು ಸೂಚನೆ ನೀಡಿದೆ.
ಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಫೆಬ್ರವರಿ 13 ರಿಂದ 26 ರವರೆಗೆ ಕೈಗೊಂಡಿದ್ದ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಮುಂದೂಡಿದೆ. ಬಡ್ತಿ ಪ್ರಕ್ರಿಯೆಯಲ್ಲಿ 2016ರಲ್ಲಿ ನೇಮಕವಾದ ಪದವೀಧದರ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಸೇರ್ಪಡೆ ಮಾಡಬೇಕಿತ್ತು, ಆದರೆ ಅದಕ್ಕೂ ಮೊದಲು ನೇಮಕವಾದ ಶಿಕ್ಷಕರ ಪಟ್ಟಿಯನ್ನು ಮಾತ್ರ ಇಲಾಖೆ ರಚಿಸಿದ್ದು, ಇದನ್ನು ಪ್ರಶ್ನಿಸಿ ಶಿಕ್ಷಕರು ಕೆಎಟಿ ಮೊರೆ ಹೋಗಿದ್ದರು.