ಬೆಂಗಳೂರು: ಪದವೀಧದರ(ಜಿಪಿಟಿ) ಶಿಕ್ಷಕರ ನೇಮಕಾತಿ ಮಾಡಿಕೊಂಡಾಗಿನಿಂದಲೂ ಬಡ್ತಿ ನೀಡದೆ ಕೋರ್ಟ್ ಆದೇಶ ಉಲ್ಲಂಘಿಸಿದ ಶಿಕ್ಷಣ ಇಲಾಖೆಗೆ ಕರ್ನಾಟಕ ಆಡಳಿತ ನ್ಯಾಯ ಮಂಡಳಿ(KAT) ಚಾಟಿ ಬೀಸಿದೆ.
ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿಗೆ ಮೊದಲು ಆ ಹುದ್ದೆಗಳಿಗೆ ಪ್ರತ್ಯೇಕ ವೃಂದ ಮತ್ತು ನೇಮಕಾತಿ ನಿಯಮಗಳನ್ನು ರಚಿಸದ ಹಾಗೂ ಮುಖ್ಯ ಶಿಕ್ಷಕರ ಹುದ್ದೆಗೆ ಪ್ರಾಥಮಿಕ ಶಾಲೆ ಶಿಕ್ಷಕ(PHT) ವೃಂದದಲ್ಲಿರುವ ಸಹ ಶಿಕ್ಷಕರೊಂದಿಗೆ ಪದವಿ ಪದವೀಧರ ಜಿಪಿಟಿ ಶಿಕ್ಷಕರನ್ನು ಪರಿಗಣಿಸುವಂತೆ ನೀಡಿದ ಆದೇಶ ಉಲ್ಲಂಘಿಸಿದ ಶಿಕ್ಷಣ ಇಲಾಖೆ ಉನ್ನತ ಅಧಿಕಾರಿಗಳ ಕ್ರಮದ ಬಗ್ಗೆ ಮಂಡಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ರಾಜ್ಯದ ಪ್ರಾಥಮಿಕ ಶಾಲೆಗಳ ಪದವೀಧರ ಶಿಕ್ಷಕರನ್ನು ನೇಮಕ ಮಾಡಿಕೊಂಡಾಗಿನಿಂದಲೂ ಬಡ್ತಿ ನೀಡದ, ಕೋರ್ಟ್ ಆದೇಶ ಉಲ್ಲಂಘಿಸಿದ ನಿಮ್ಮ ವಿರುದ್ಧ ಏಕೆ ಕಾನೂನು ಕ್ರಮ ಕೈಗೊಳ್ಳಬಾರದು ಎಂದು ಮಂಡಳಿ ಪ್ರಶ್ನಿಸಿದೆ. ಮಾರ್ಚ್ 22ರೊಳಗೆ ಈ ಕುರಿತು ಉತ್ತರ ನೀಡುವಂತೆ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳು, ಆಯುಕ್ತರು ಮತ್ತು ನಿರ್ದೇಶಕರಿಗೆ ಆದೇಶಿಸಲಾಗಿದೆ.
ನ್ಯಾಯಾಲಯದ ಆದೇಶದ ನಂತರ ಎಚ್ಚೆತ್ತುಕೊಂಡ ಶಾಲಾ ಶಿಕ್ಷಣ ಇಲಾಖೆ, ಫೆಬ್ರವರಿ 13 ರಿಂದ 26 ರವರೆಗೆ ಕೈಗೊಂಡಿದ್ದ ಮುಖ್ಯ ಶಿಕ್ಷಕರ ಬಡ್ತಿ ಕೌನ್ಸೆಲಿಂಗ್ ಪ್ರಕ್ರಿಯೆ ಮುಂದೂಡಿದೆ.