ಬೆಂಗಳೂರು: ಮಲ ಹೊರುವ ಪದ್ಧತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆ – 2013ರ ಅಡಿಯಲ್ಲಿ ನಿಯಮಗಳ ಅನುಸಾರ ಕೈಗೊಂಡ ಕ್ರಮಗಳ ಕುರಿತು ಜುಲೈ 9ರಂದು ಉತ್ತರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ರಾಜ್ಯದಲ್ಲಿ ಮಲ ಹೊರುವ ಪದ್ಧತಿಯ ನಿರ್ಮೂಲನೆಗೆ ಅನುಷ್ಠಾನಗೊಳಿಸಲಾದ ಮಲ ಹೊರುವ ಜಾಡಮಾಲಿಗಳ ನಿಯೋಜನೆ ನಿಷೇಧ ಮತ್ತು ಪುನರ್ವಸತಿ ಕಾಯ್ದೆ ಅನುಸಾರ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಒದಗಿಸುವಂತೆ ಸೂಚನೆ ನೀಡಲಾಗಿದೆ.
ನಿಷೇಧದ ನಡುವೆಯೂ ಮಲಹೊರುವ ಪದ್ಧತಿ ಜಾರಿಯಲ್ಲಿರುವ ಬಗ್ಗೆ ಸ್ವಯಂ ಪ್ರೇರಿತ ಪಿಐಎಲ್ ಮತ್ತು ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಟ್ರೇಡ್ ಯೂನಿಯನ್ ಮತ್ತು ಹೈಕೋರ್ಟ್ ಕಾನೂನು ಸೇವಾ ಪ್ರಾಧಿಕಾರ ಮತ್ತು ಇತರರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಆಂಜಾರಿಯಾ ಮತ್ತು ನ್ಯಾಯಮೂರ್ತಿ ಅರವಿಂದ್ ಅವರಿದ್ದ ವಿಭಾಗೀಯ ಪೀಠದಿಂದ ಈ ಸೂಚನೆ ನೀಡಲಾಗಿದ್ದು, ವಿಚಾರಣೆ ಮುಂದೂಡಲಾಗಿದೆ.