ನವದೆಹಲಿ: ಕೆಲಸದ ಸ್ಥಳದಲ್ಲಿ ಜೀನ್ಸ್ ಮತ್ತು ಟೀ-ಶರ್ಟ್ ಧರಿಸದಂತೆ ನೌಕರರಿಗೆ ಮಹಾರಾಷ್ಟ್ರ ಸರ್ಕಾರ ಸೂಚನೆ ನೀಡಿದೆ. ಶುಕ್ರವಾರ ಈ ಕುರಿತಾಗಿ ಅಧಿಸೂಚನೆ ಹೊರಡಿಸಲಾಗಿದೆ.
ಸರ್ಕಾರಿ ಉದ್ಯೋಗಿಗಳು ಕೆಲಸದ ಸ್ಥಳದಲ್ಲಿ ಜೀನ್ಸ್ ಮತ್ತು ಟೀ-ಶರ್ಟ್ ಧರಿಸುವುದನ್ನು ನಿರ್ಬಂಧಿಸಲಾಗಿದೆ. ಸಚಿವಾಲಯ ಮತ್ತು ಸರ್ಕಾರಿ ಕಚೇರಿಗಳಲ್ಲಿ ಸರ್ಕಾರಿ ನೌಕರರು, ಗುತ್ತಿಗೆ ನೌಕರರು ವೃತ್ತಿಪರವಾಗಿ ಕಾಣಲು ಸೂಕ್ತವಾದ ಫಾರ್ಮಲ್ ಬಟ್ಟೆಗಳನ್ನು ಧರಿಸಬೇಕಿದೆ. ಕನಿಷ್ಟ ವಾರಕ್ಕೆ ಒಂದು ಸಲ ಪ್ರತಿ ಶುಕ್ರವಾರ ಖಾದಿ ಬಟ್ಟೆಗಳನ್ನು ಧರಿಸಲು ತಿಳಿಸಲಾಗಿದೆ.
ಮಹಿಳಾ ಉದ್ಯೋಗಿಗಳು ಸೀರೆ, ಸಲ್ವಾರ್ ಗಳು, ಚೂಡಿದಾರ್ ಕುರ್ತಾಗಳು, ಪ್ಯಾಂಟ್ ಮತ್ತು ಶರ್ಟ್ ಗಳನ್ನು ದುಪ್ಪಟಗಳೊಂದಿಗೆ ಧರಿಸಬಹುದು. ಪುರುಷರು ಶರ್ಟ್ ಮತ್ತು ಪ್ಯಾಂಟ್ ಧರಿಸಬಹುದು. ಇಂತಹ ಆದೇಶ ಹೊರಡಿಸಿರುವುದರಲ್ಲಿ ಮಹಾರಾಷ್ಟ್ರ ಸರ್ಕಾರ ಮೊದಲೇನಲ್ಲ. ಈ ಹಿಂದೆಯೇ ಬಿಹಾರ, ತಮಿಳುಣಾಡು, ಕರ್ನಾಟಕ, ಹಿಮಾಚಲ ಪ್ರದೇಶ, ರಾಜಸ್ತಾನದಲ್ಲಿ ಸರ್ಕಾರಿ ನೌಕರರ ಡ್ರೆಸ್ ಕೋಡ್ ಕುರಿತಾಗಿ ಅಧಿಸೂಚನೆ ಹೊರಡಿಸಲಾಗಿದೆ.