ಮೈಸೂರು: ಹಿಂದೂ ಧರ್ಮದ ಬಗ್ಗೆ ಕೆಟ್ಟದಾಗಿ ಮಾತನಾಡಿ, ನಿಂದಿಸಿರುವ ಪ್ರೊ.ಕೆ.ಎಸ್.ಭಗವಾನ್ ಹೊಸ ವಿವಾದ ಸೃಷ್ಟಿಸಿದ್ದಾರೆ.
ಮೈಸೂರಿನಲ್ಲಿ ಮಹಿಷ ದಸರಾದಲ್ಲಿ ಮಾತನಾಡಿದ ಪ್ರೊ.ಕೆ.ಎಸ್.ಭಗವಾನ್, ಯಾರು ಹೀನರೋ ಅವರು ಹಿಂದೂಗಳು. ಹಿಂದೂ ಎಂದರೆ ಹಿಂದಕ್ಕೆ ಹೋಗುವ ಜನ. ಹಿಂದೂಗಳು ಎಂದೂ ಮುಂದಕ್ಕೆ ಬರುವುದಿಲ್ಲ. ಹಾಗೂ ಬೇರೆಯವರನ್ನು ಮುಂದೆ ಬರಲು ಬಿಡುವುದೂ ಇಲ್ಲ. ಹಿಂದೂ ಧರ್ಮ ಅಂದರೆ ಅಧು ಹಿಂದೂಗಳ ಧರ್ಮವಲ್ಲ. ಹಿಂದೂ ಧರ್ಮ ಎಂದರೆ ಅದು ಬ್ರಾಹ್ಮಣರ ಧರ್ಮ. ಅಲ್ಲಿ ಗಂಡಸರು ಮಾತ್ರ ಬ್ರಾಹ್ಮಣರು ಅಂತಾರೆ. ಹೆಂಗಸರನ್ನು ಬ್ರಾಹ್ಮಣರು ಎನ್ನಲ್ಲ ಶೂದ್ರರು ಅಂತಾರೆ. ಮಾನ ಮರ್ಯಾದೆ ಇದ್ದರೆ ಮೊದಲು ದೇವಸ್ಥಾನಗಳಿಗೆ ಹೋಗುವುದನ್ನು ನಿಲ್ಲಿಸಬೇಕು ಎಂದು ಎಂದು ನಾಲಿಗೆ ಹರಿಬಿಟ್ಟಿದ್ದಾರೆ.
ಜ್ಞಾನದ ಹಸಿವು ಇಲ್ಲದ ಕಾರಣ ಹಲವರು ಗುಲಾಮರಾಗಿದ್ದಾರೆ. ನಾನು ಕಳೆದ 50 ವರ್ಷಗಳಿಂದ ದೇವಸ್ಥಾನಕ್ಕೆ ಹೋಗುವುದಿಲ್ಲ. ದೇವಸ್ಥಾನಕ್ಕೆ ಹೋಗದಿದ್ದರೆ ಏನೂ ಆಗಲ್ಲ. ದೇವಸ್ಥಾನಕ್ಕೆ ಹೋದರೆ ದುಡ್ಡು ಹಾಕ್ತೀರಾ, ಕಾಯಿ ಕೊಟ್ಟರೆ ಅರ್ಧ ಕಾಯಿ ಇಟ್ಟುಕೊಂಡು ಅರ್ಧ ಕೊಡುತ್ತಾರೆ. ದೇವಸ್ಥಾನಕ್ಕೆ ಹೋದರೆ ಕಳೆದುಕೊಳ್ಳುತ್ತೇವೆ. ಶೂದ್ರರಿಗೆ ಮಾನ ಮರ್ಯಾದೆ ಇದ್ದರೆ ದೇವಸ್ಥಾನಕ್ಕೆ ಹೋಗುವುದು ನಿಲ್ಲಿಸಿ ಎಂದಿದ್ದಾರೆ.
ಮನುಸ್ಮೃತಿಯಲ್ಲಿ ಶ್ರೂದ್ರ ಎಂದರೆ ಸೂಳೆಗೆ ಹುಟ್ಟಿದವನು ಅಂತಾ ಇದೆ. ನಾವು ಶೂದ್ರರು ಎಂದು ಒಪ್ಪಿಕೊಳ್ಳಬೇಕಾ? ಹೀಗೆಂದು ಹೇಳುವ ಹಿಂದೂ ಧರ್ಮದಲ್ಲಿ ನಾವಿರಬೇಕಾ? ಹಿಂದೂ ಧರ್ಮ ನಮ್ಮದಲ್ಲ. ನಮಗೆ ಹಿಂದೂ ಧರ್ಮ ಬೇಕಾಗಿಲ್ಲ. ಎಲ್ಲರೂ ಬೌದ್ಧ ಧರ್ಮವನ್ನು ನಂಬಿ. ನಾನು ಹೇಳಿದ್ದನ್ನು ನಂಬಿ ಎಂದು ಬುದ್ಧ ಹೇಳಲ್ಲ. ನಾನು ಹೇಳಿದ್ದನ್ನು ಕೇಳಬೇಕು ಇಲ್ಲದಿದ್ದರೆ ಸ್ವರ್ಗ ಸಿಗಲ್ಲ ಅಂತ ಏಸು ಹೇಳ್ತಾರೆ. ನನ್ನ ಮಾತು ಕೇಳದಿದ್ದರೆ ಮೋಕ್ಷ ಸಿಗಲ್ಲ ಎಂದು ಪ್ರವಾದಿ ಹೇಳ್ತಾರೆ. ನಾನು ಹೇಳಿದ್ದು ಕೇಳದಿದ್ದರೆ ನರಕಕ್ಕೆ ಹೋಗ್ತೀರಾ ಎಂದು ಕೃಷ್ಣ ಹೇಳ್ತಾರೆ. ಆದರೆ ನಾನು ಹೇಳಿದ್ದನ್ನು ನಂಬಿ ಎಂದು ಬುದ್ಧ ಹೇಳಿಲ್ಲ. ನಾವು ಬೌದ್ಧ ಧರ್ಮಕ್ಕೆ ಹೋಗಬೇಕು. ಶೂದ್ರ ಎಂಬ ಗುಲಾಮರನ್ನು ಎಕ್ಕಡದಲ್ಲಿ ಹೊಡೆಯಬೇಕು ಎಂದಿದ್ದಾರೆ.
ಯಾರು ಹೀನನಾಗಿದ್ದಾನೆ ಅವನು ಹಿಂದೂ. ಹಿಂದೂ ಎಂದರೆ ಹೀನ ಎಂದರ್ಥ. ಯಾರೂ ಹಿಂದೂ ಆಗಬಾರದು ಎಂದು ಹೇಳುವ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.